ಕಾಂಗ್ರೆಸ್ಸಿನವರು ಮಹಾನ್‌ ಕಳ್ಳರು, ಖದೀಮರು, ನಾಲಾಯಕ್‌ : ಪ್ರಹ್ಲಾದ್‌ ಜೋಶಿ ಆಕ್ರೋಶ

KannadaprabhaNewsNetwork | Updated : Jul 01 2025, 11:43 AM IST

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧಿಸಿದ 2.6 ಲಕ್ಷ ಜನರಲ್ಲಿ 1.10 ಲಕ್ಷ ಜನ ಆರ್‌ಎಸ್‌ಎಸ್‌ ಮತ್ತು ಜನಸಂಘದವರು ಇದ್ದರು. ಭಾರತೀಯ ಮಣ್ಣು ಮತ್ತು ಭಾರತೀಯರ ರಕ್ತದಲ್ಲಿ ಪ್ರಜಾಪ್ರಭುತ್ವವಿದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಮತ್ತೆ ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು.  

ಹುಬ್ಬಳ್ಳಿ: ಕಾಂಗ್ರೆಸ್‌ ಡಿಎನ್‌ಎಯಲ್ಲೇ ಪ್ರಜಾಪ್ರಭುತ್ವ, ಜಾತ್ಯಾತೀತತೆ ಇಲ್ಲ. ಕಾಂಗ್ರೆಸ್‌ ಕಮ್ಯುನಲ್‌ ಮತ್ತು ಆ್ಯಂಟಿ ಡೆಮಾಕ್ರಸಿ ಪಾರ್ಟಿ. ಕಾಂಗ್ರೆಸ್ಸಿನವರು ಮಹಾನ್‌ ಕಳ್ಳರು, ಖದೀಮರು, ನಾಲಾಯಕ್‌. ಇಂತಹವರನ್ನು ಬುತ್ತಿಕಟ್ಟಿಕೊಂಡು ಹುಡುಕಿದರೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಬಿಜೆಪಿಯ ಹುಬ್ಬ‍ಳ್ಳಿ- ಧಾರವಾಡ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಜ್ಯ ಮಾಕ್‌ ಪಾರ್ಲಿಮೆಂಟ್‌ ಸೆಷನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಂವಿಧಾನದ ಆರ್ಟಿಕಲ್‌ 362 ಪ್ರಕಾರ ನಿಜವಾಗಿ ತುರ್ತಾದ ಕಾರಣಗಳು ಅಂದರೆ, ಆಂತರಿಕ ಗಲಭೆಗಳಾದಾಗ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ, ಆರ್ಥಿಕ ಸ್ಥಿತಿ ಸರಿಯಾಗಿರದ ವೇಳೆ, ಯುದ್ಧಗಳಾಗುವ ವೇಳೆ ಮಾತ್ರ ತುರ್ತು ಪರಿಸ್ಥಿತಿ ಹೇರಲು ಅವಕಾಶವಿದೆ. ಆದರೆ, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಕೇವಲ ತಮ್ಮ ಅಧಿಕಾರ ಹೋಗುತ್ತದೆ ಎಂಬ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರು ಎಂದರು.

ಇಂದಿರಾಗಾಂಧಿ ಅಕ್ರಮವಾಗಿ ಚುನಾವಣೆಯಲ್ಲಿ ಗೆದ್ದು ಬಂದಿದ್ದು ಅಲಹಾಬಾದ್‌ ಕೋರ್ಟ್‌ನಲ್ಲಿ ಸಾಬೀತಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ತೀರ್ಪು ಬರುವ ಮೊದಲು ಸಂಸತ್‌ ಸಭೆ ಕರೆದು ರಾಜ್ಯಪಾಲರು, ರಾಷ್ಟ್ರಪತಿ ಜಾರಿ ಮಾಡಿದ ನಿರ್ಣಯಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಆರ್ಟಿಕಲ್‌ 38ಕ್ಕೆ ತಿದ್ದುಪಡಿ ತಂದರು. ಬಳಿಕ ಪ್ರಧಾನಿ, ಉಪರಾಷ್ಟ್ರಪತಿ ಮತ್ತು ಲೋಕಸಭೆ ಸ್ಪೀಕರ್‌ ಆಯ್ಕೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಆರ್ಟಿಕಲ್‌ 39ಕ್ಕೆ ತಿದ್ದುಪಡಿ ತಂದರು. ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿ ಮಾಡಿ, ಹೋರಾಟಗಾರರನ್ನು ಜೈಲಿಗೆ ಹಾಕಿ ಹಿಂಸಿಸುತ್ತಾರೆ. ಈ ವೇಳೆ 1.87 ಕೋಟಿ ಜನರಿಗೆ ನಸ್‌ಬಂಧಿ (ಸಂತಾನಹರಣ ಶಸ್ತ್ರಚಿಕಿತ್ಸೆ) ಮಾಡಿದರು. ಅವರಲ್ಲಿ 1774 ಜನ ನಂಜಿನಿಂದ ಮೃತಪಟ್ಟರು. ಇದೇ ರೀತಿ ಹಲವರನ್ನು ಹಿಂಸಿಸಿದ್ದಾರೆ ಎಂದು ಕಿಡಿಕಾರಿದರು.

ಶೀಘ್ರ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯುತ್ತೆ: ಜೋಶಿ

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಷಯ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕಿದೆ. ಶೀಘ್ರದಲ್ಲಿಯೇ ಆ ಸ್ಥಾನಕ್ಕೆ ನೇಮಕ ಮಾಡಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಆಯ್ಕೆಯಾದ ನೂತನ ಮೇಯರ್ ಜ್ಯೋತಿ ಪಾಟೀಲ ಹಾಗೂ ಉಪಮೇಯರ್ ಸಂತೋಷ ಚವ್ಹಾಣ ಅವರಿಗೆ ಸೋಮವಾರ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಉಳಿದ ರಾಜ್ಯಗಳ ಅಧ್ಯಕ್ಷರ ಆಯ್ಕೆ ಯಾವ ರೀತಿ ನಡೆಯುತ್ತದೆಯೋ ಅದೇ ರೀತಿ ಕರ್ನಾಟಕ ರಾಜ್ಯದ ಅಧ್ಯಕ್ಷರ ಆಯ್ಕೆಯೂ ನಡೆಯುತ್ತದೆ. ಎಲ್ಲ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸುವ ವೇಳೆ ಕರ್ನಾಟಕದ ಬಗ್ಗೆಯೂ ಚರ್ಚೆಯಾಗಿದ್ದು, ಶೀಘ್ರದಲ್ಲೇ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಚರ್ಚೆಯೇ ಇದೀಗ ಅಪ್ರಸ್ತುತ ಎಂದು ತಳ್ಳಿಹಾಕಿದರು.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧಿಸಿದ 2.6 ಲಕ್ಷ ಜನರಲ್ಲಿ 1.10 ಲಕ್ಷ ಜನ ಆರ್‌ಎಸ್‌ಎಸ್‌ ಮತ್ತು ಜನಸಂಘದವರು ಇದ್ದರು. ಭಾರತೀಯ ಮಣ್ಣು ಮತ್ತು ಭಾರತೀಯರ ರಕ್ತದಲ್ಲಿ ಪ್ರಜಾಪ್ರಭುತ್ವವಿದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಮತ್ತೆ ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು. ಮುಂದೆ ಯಾರೂ ಈ ತುರ್ತು ಪರಿಸ್ಥಿತಿ ಹೇರಬಾರದು ಎನ್ನುವ ದೃಷ್ಟಿಯಿಂದ ಕರಾಳ ದಿನಾಚರಣೆ ಮಾಡಲಾಗುತ್ತಿದೆ ಎಂದರು.

ಮಹಿಳಾ ಮೋರ್ಚಾ ವತಿಯಿಂದ ನಡೆದ ಅಣಕು ಸಂಸತ್‌ ಕಾರ್ಯಕ್ರಮ ಗಮನ ಸೆ‍ಳೆಯಿತು. ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ನೂತನ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಮಾಜಿ ಮೇಯರ್ ರಾಮಪ್ಪ ಬಡಿಗೇರ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜು‍ಳಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Read more Articles on