ಕನ್ನಡಪ್ರಭ ವಾರ್ತೆ ಕಲಬುರಗಿ
ಸಂವಿಧಾನ ವಿರೋಧಿಗಳೆಂದು ಬಿಜೆಪಿ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವ, ಸಂವಿಧಾನ ಎರಡರ ಕತ್ತು ಹಿಸುಕಿದವರು ಎಂದು ದೂರಿರುವ ಹಿರಿಯ ಎಂಎಲ್‌ಸಿ ಶಶಿಲ್ ನಮೋಶಿಯವರು ಅಂದಿನ ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ದೇಶದಲ್ಲೆಲ್ಲಾ ಅಶಾಂತಿಯ ವಾತಾವರಣ ಹುಟ್ಟುಹಾಕಿದ್ದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಮೋಶಿ, ಸಂವಿಧಾನ ವಿರೋಧಿಗಳು, ಸಂವಿಧಾನ ಬದಲಿಸುವ ಹುನ್ನಾರ ನಡೆಸಿದ್ದಾರೆಂದು ಪದೇ ಪದೇ ಬಿಜೆಪಿಯವರ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ಪ್ರವೃತ್ತಿ ಎಂತಹದ್ದು. ಹಿಂದಿನಿಂದಲೂ ಕಾಂಗ್ರೆಸ್ ಸಂವಿಧಾನ ವಿರೋಧಿ, ಸಂವಿಧಾನ ಬರೆದ ಅಂಬೇಡ್ಕರ್ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾದಂತಹ ಹಲವು ನಿಲುವುಗಳನ್ನು ಹೇಗೆ ತೆಗೆದಕೊಂಡು ಕಾಪಾಡಿಕೊಂಡು ಬಂತು ಎಂಬುದನ್ನು ವಿವರಿಸುತ್ತ ಇದನ್ನೆಲ್ಲ ಯುವಕರಿಗೆ ಇಂದಿನ ಪೀಳಿಗಿಗೆ ತಿಳಿ ಹೇಳುವ ಅಗತ್ಯವಿದೆ ಎಂದರು.
ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್ ಅವರ ಹೆಸರುಗಳನ್ನು ಕಾಂಗ್ರೆಸ್ ಬಾಯಿಂದ ಕೇಳುವುದು ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ತಿವಿದ ನಮೋಶಿದೇಶದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ಎಂಬುದು ಯಾರೂ ಮರೆಯಬಾರದು ಎಂದರು.ಸಂವಿಧಾನ ಬದಲಿಸುತ್ತೇವೆಂದು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದರೆ ಹೊರತು ಅದು ಬಿಜೆಪಿಯ ಆಶಯವಾಗಿರಲಿಲ್ಲ. ಕಾಂಗ್ರೆಸ್ ಇದನ್ನೇ ಹೇಳುತ್ತ ಸುಳ್ಳು ಹಳಿ ಲಾಭ ಪಡೆಯಲು ಹುನ್ನಾರ ಮಾಡಿತ್ತು. ಲೋಕ ಸಮರದಲ್ಲಿ ದೇಶದ ಜನ ಕಾಂಗ್ರೆಸ್‌ಗೆ ಉತ್ತರ ನೀಡಿದ್ದಾರೆಂದು ನಮೋಶಿ ಟೀಕಿಸಿದರು.
ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಮಾಡಿದಷ್ಟು ಅಪಚಾರ ಯಾರೂ ಮಾಡಿಲ್ಲವೆಂದು ಇತಿಹಾಸವೇ ಹೇಳುತ್ತಿದೆ. ಇದು ದೇಶದ ಯುವಕರಿಗೆ ತಿಳಿಸಬೇಕಿದೆ. ಬಿಜೆಪಿ ಸಂವಿಧಾನದ ಪರವಾಗಿದೆ. ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ಮಾಡಿ ಸಂವಿಧಾನಕ್ಕೆ ನಮಿಸಿದ್ದಾರೆಂದರೆ ಸಂವಿಧಾನವೇ ನಮಗೆ ಪರಮೋಚ್ಚ ಎಂದರ್ಥ. ಕಾಂಗ್ರೆಸ್ ಇನ್ನಾರೂ ಸುಳ್ಳು ಹೇಳದು ಬಿಡಬೇಕೆಂದರು.ರಾಘವೇಂದ್ರ ಕೋಗನೂರ್, ರಾಜುಗೌಡ ನಾಗನಹಲ್ಳಿ, ಬಸವರಾಜ ಬೆಣ್ಣೂರ, ಮಾಜಿ ಸಚಿವ ಬಾಬೂರಾವ ಚವ್ಹಣ್, ಧರ್ಮಣ್ಣ ದೊಡ್ಮನಿ, ಗಿರೀಶ, ಶರಮು ಕುಂಬಾರ್, ರಾಜು ವಾಡೇಕರ್ ಸುದ್ದಿಗೋಷ್ಠಿಯಲ್ಲಿದ್ದರು.
ಕಲಬುರಗಿಯಲ್ಲಿ ಜೂ.25ರಂದು ಸಮಾವೇಶ: ಕಾಂಗ್ರೆಸ್ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ಕಾಲಘಟ್ಟಕ್ಕೆ ಇದೀಗ 50 ತುಂಬಿದೆ. 21 ತಿಂಗಳ ಕರಾಳ ತುರ್ತು ಪರಿಸ್ಥಿತಿ ಜಾರಿಯಾಗಿ ಎಲ್ಲಾ ಸ್ವಾತಂತ್ರ್ಯಗಳ ಹರಣವಾಗಿತ್ತು. ಕಾಂಗ್ರೆಸ್ ಸರ್ವಾಧಿಕಾರ, ಸಂವಿಧಾನದ ಮೇಲಿನ ಅವರ ಗದಾಪ್ರಹಾರ ಖಂಡಿಸಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವೇದಿಕೆಯಲ್ಲಿ ರಾಜ್ಯಾದ್ಯಂತ 10 ಕಡೆ ಸಮಾವೇಶಗಳನ್ನು ನಡೆಸಲಾಗುತ್ತಿದ್ದು ಅದರಲ್ಲಿ ಒಂದು ಸಮಾವೇಶ ಜೂ.25ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಶಶಿಲ್ ನಮೋಶಿ, ಅವ್ವಣ್ಣಮ್ಯಾಕೇರಿ, ಅಂಬಾರಾಯ ಅಷ್ಟಗಿ ಹೇಳಿದ್ದಾರೆ.ಪಂಡಿತ ರಂಗಮಂದಿರದಲ್ಲಿನ ಸಮಾವೇಶದಲ್ಲಿ ಮಾಜಿ ಸಚಿವ ಮಹೇಶ, ಎಂಎಲ್‌ಸಿ ಸಿಟಿ ರವಿ, ವಕೀಲರಾದ ಶ್ರೀಧರ ಪ್ರಭು, ಬಸವರಾಜ ಚಿಂಚೋಳಿ ಪಾಲ್ಗೊಂಡು ಮಾತನಾಡಲಿದ್ದಾರೆ. ನಮ್ಮ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭಕ್ಕೆ ಬಂದು ಇವರೆಲ್ಲರ ವಿಚಾರಗಳನ್ನು, ತುರ್ತು ಪರಿಸ್ಥಿತಿ, ಕಾಂಗ್ರೆಸ್‌ನ ಇನ್ನೊಂದು ಕರಾಳ ಮುಖದ ಕಟು ವಾಸ್ತವಗಳನ್ನು ಅರಿಯಬೇಕು ಎಂದು ಇವರು ಮನವಿ ಮಾಡಿದ್ದಾರೆ.