ಶಿರಸಿ: ಭಗವದ್ಗೀತೆಯಲ್ಲಿ ಅನೇಕ ಯೋಗಗಳನ್ನು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಯೋಗದ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿ ಗ್ರಂಥದ ರೂಪದಲ್ಲಿ ನೀಡಿದವರು ಪತಂಜಲಿ ಮುನಿಗಳು ಎಂದು ಶಿರಳಗಿಯ ಚೈತನ್ಯ ರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ರಾಷ್ಟ್ರೋನ್ನತಿಗಾಗಿ ಯೋಗದ ಮೂಲಕ ವೈಯಕ್ತಿಕ ಕೊಡುಗೆ ವಿಷಯದ ಕುರಿತು ಆಶೀರ್ವಚನ ನೀಡಿದರು.ಜ್ಞಾನದ ರಾಶಿಯ ಒಂದು ಶಾಖೆಯೇ ಯೋಗವಾಗಿದೆ. ರಾಷ್ಟ್ರೋನ್ನತಿ ಕೇವಲ ಭೌತಿಕ ಬೆಳವಣಿಗೆಯಿಂದ ಮಾತ್ರ ಸಾಧ್ಯವಿಲ್ಲ. ಪ್ರತಿ ವ್ಯಕ್ತಿ ಆಂತರಿಕವಾಗಿ ಬೆಳವಣಿಗೆ ಆಬೇಕು. ಹೀಗಾಗಿ ನಮ್ಮ ಋಷಿಮುನಿಗಳು ತಮ್ಮ ಒಳಗಡೆಯ ಸಂಗತಿಗಳನ್ನು, ಶಕ್ತಿಯನ್ನು ಅಧ್ಯಯನ ಮಾಡುತ್ತಿದ್ದರು. ಪ್ರಾಚೀನ ಗ್ರಂಥ, ಉಪನಿಷತ್‌ಗಳಲ್ಲಿ ಯೋಗದ ಉಪದೇಶಗಳು ಕಾಣುತ್ತವೆ. ಯೋಗ ಭಾರತೀಯ ಸನಾತನ ಜೀವನ ಶೈಲಿಯ ಅವಿಭಾಜ್ಯ ಅಂಗ. ಯೋಗ ಜೀವನ ಪದ್ಧತಿಯೂ ಆಗಿದೆ. ಜೀವಾತ್ಮನನ್ನು ಪರಮಾತ್ಮನೊಂದಿಗೆ ಸಂಯೋಜಿಸುವುದನ್ನು ಯೋಗ ಎನ್ನುತ್ತಾರೆ. ಕುಣಿಯುವ ಮನಸ್ಸನ್ನು ಅಲೆ ರಹಿತವಾಗಿ ಮಾಡುವುದು ಯೋಗ. ಯೋಗದ ದಾರಿಯಲ್ಲಿ ಸಾಗಿದರೆ ನಮ್ಮ ದೇಶ ಹಿಂದಿನ ಭವ್ಯತೆಯನ್ನು ಮತ್ತೆ ಪಡೆಯಲು ಸಾಧ್ಯವಿದೆ. ನಡೆ ಮತ್ತು ನುಡಿಯಲ್ಲಿ ಸರಳತೆ ಇರಬೇಕು. ಮಕ್ಕಳಿಗೆ ಯಾವುದೇ ಶಿಕ್ಷಣ ನೀಡಿದರೂ ಸತ್ಯ ಮತ್ತು ಪ್ರಾಮಾಣಿಕತೆ ಕಲಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತದ ಇತಿಹಾಸ ನಮಗೆ ಹೆಮ್ಮೆ ಮೂಡಿಸುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಜಗತ್ತಿಗೇ ಭಾರತ ಗುರುವಾಗಿತ್ತು. ಅಂದು ಸೈನ್ಯ ಅಥವಾ ಸಂಪತ್ತಿನ ಕಾರಣ ಭಾರತ ಜಗತ್ತಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಜ್ಞಾನದ ಅಗಾಧ ಭಂಡಾರದ ಮೂಲಕ ಗುರುವಾಗಿತ್ತು. ನಮ್ಮ ಋಷಿ- ಮುನಿಗಳು ಜ್ಞಾನದ ಒಂದೊಂದೇ ವಿಷಯದಲ್ಲಿ ಸಾಧನೆ ಮಾಡುವ ಮೂಲಕ ಪರಾಕಾಷ್ಟೆ ತಲುಪಿದ್ದರು. ಪರಕೀಯರ ದಾಳಿಯಿಂದ ನಾವು ನಿಜ ಮೌಲ್ಯ ಏನು ಎಂಬುದನ್ನು ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಯೋಗ ವಿಸ್ತರಿಸಿದ್ದು, ಜಗತ್ತೇ ಒಪ್ಪಿಕೊಂಡಿದೆ. ಅಭಿವೃದ್ಧಿಯ ಜತೆ ಮೋದಿಜಿಯವರು ನಮ್ಮ ಜ್ಞಾನ ಸಂಪತ್ತನ್ನು ಎಲ್ಲೆಡೆ ವಿಸ್ತರಿಸಿದ್ದಾರೆ ಎಂದರು.೨೦೦ಕ್ಕೂ ಅಧಿಕ ಜನ ಭಾಗಿ: ವಿವಿಧ ಸಂಘಟನೆಗಳ ಆಶ್ರಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಿಂದಲೂ ಆಗಮಿಸಿದ ೨೦೦ಕ್ಕೂ ಅಧಿಕ ಜನ ಪಾಲ್ಗೊಂಡು ಯೋಗ ಮಾಡಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವತಃ ಯೋಗ ಮಾಡುವ ಮೂಲಕ ಇತರರನ್ನೂ ಪ್ರೇರೇಪಿಸಿದರು. ಆಯುರ್ವೇದ ವೈದ್ಯೆ ಡಾ. ಪೂರ್ಣಿಮಾ ಹೆಗಡೆ, ಡಾ. ದಿನೇಶ ಹೆಗಡೆ, ಭಾಗೀರಥಿ ಹೆಗಡೆ ಯೋಗ ಹೇಳಿಕೊಟ್ಟರು.
ಯೋಗ ದಿನಾಚರಣಾ ಸಮಿತಿ ಅಧ್ಯಕ್ಷ ಅನಿಲ ಕರಿ, ಸಂಚಾಲಕ ಶ್ರೀಕಾಂತ ಹೆಗಡೆ, ಡಾ. ಶಿವರಾಮ ಕೆ.ವಿ., ಜನಾರ್ದನ ಆಚಾರ್ಯ ಮತ್ತಿತರರು ಇದ್ದರು.