ಕನಕಪುರ: ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಡ್ಡ ಹಾದಿಯಲ್ಲಿ ಸೋಲಿಸಿರುವ ಕಾಂಗ್ರೆಸ್ ಮುಖಂಡರಿಗೆ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ರಾಮನಗರ ಜಿಲ್ಲಾ ದಿಶಾ ಕಮಿಟಿ ಸದಸ್ಯ, ಜೆಡಿಎಸ್ ಮುಖಂಡ ರಾಜೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಅಧ್ಯಕ್ಷರಾಗುವ ಮುನ್ನ ಹೇಗಿದ್ದಿರಿ? ಎಲ್ಲಿದ್ದೆ? ಎನ್ನುವ ಚರಿತ್ರೆ ಜನರಿಗೆ ಚೆನ್ನಾಗಿ ಗೊತ್ತಿದೆ. ಮಾಜಿ ಶಾಸಕ ಸಿಎಂ ಲಿಂಗಪ್ಪನವರ ಹತ್ತಿರ ಹೇಗೆ ನಡೆದುಕೊಂಡಿದ್ದೀಯಾ ಎನ್ನುವುದು ಗೊತ್ತಿದೆ. ನಿನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದೆ ಮುಂದೆ ಸುತ್ತಾಡಿಕೊಂಡು ಅಧಿಕಾರ ಪಡೆದಿದ್ದು ಗೊತ್ತಿದೆ. ಯಾವುದೇ ರಾಜಕೀಯ ಚಾರಿತ್ರ್ಯವಿಲ್ಲದ ನಿಮಗೆ ನಿಖಿಲ್ ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಓಲೈಸಲು ಪುಂಗಿ ಊದಿದ್ದೀರಾ? ನಿಮ್ಮ ಪುಂಗಿ ಆಟಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಬಗ್ಗುವುದಿಲ್ಲ. ಮುಂಬರುವ 2028ರ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಜನರೇ ನಿಮ್ಮ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಚುನಾವಣೆಗೂ ಮುನ್ನ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅಧಿಕಾರ ಕೊಡಿ ಎಂದು ಅಬ್ಬರಿಸಿದ್ದರು. ಈಗ ಅಧಿಕಾರ ಅವರದೇ ಇದ್ದರೂ ಏನು ಮಾಡುತ್ತಿದ್ದಾರೆ ಎಂದು ಜನ ಕೇಳುತ್ತಿದ್ದಾರೆ. 136 ಶಾಸಕರನ್ನ ಇಟ್ಟುಕೊಂಡು ಸಾಧಿಸಿದ್ದೇನು? ಚುನಾವಣೆಗೂ ಮುನ್ನ ಪೆನ್ನು ಪೇಪರ್ ಕೊಟ್ಟಿದ್ದಕ್ಕೆ ರಾಮನಗರ ಜಿಲ್ಲಾ ಸುತ್ತಮುತ್ತ ಭೂ ಕಬಳಿಕೆ ಆರಂಭವಾಗಿದೆ. ಜನರಿಗೆ ಮಂಕಿ ಟೋಪಿ ಹಾಕಿ ಬೇಸರ ಮಾಡಿದ್ದೀರಿ. ಬಿಡದಿ ಟೌನ್‌ಶಿಪ್ ವಿಚಾರ ರೈತರ ಹೆಸರಿನಲ್ಲಿ ನಕಲಿ ನಾಟಕವಾಡಿ ರೈತರ ಬದುಕನ್ನು ನಾಶಗೊಳಿಸಿದ್ದೀರಿ. 17 ರಿಂದ 20 ಸೀಟು ಬರದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಿಮ್ಮ ಪಕ್ಷದಲ್ಲಿ 136 ಶಾಸಕರನ್ನು ಇಟ್ಟುಕೊಂಡು ಅವರನ್ನು ಸಿಎಂ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ವಂಗಾಣಿದೊಡ್ಡಿ ಗ್ರಾಮವನ್ನು ನುಂಗಿ ನೀರು ಕುಡಿದಿದ್ದಾರೆ. ಮೊದಲು ಅವರಿಗೆ ಬುದ್ಧಿ ಹೇಳಿ ಜನರ ಪರವಾಗಿ ಬನ್ನಿ, ನಿಮ್ಮ ಹೇಳಿಕೆ ವರ್ತನೆಗಳು ಹೀಗೆ ಮುಂದುವರಿದರೆ ಜನರು ಬುದ್ಧಿ ಕಲಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಎಚ್ಚರಿಸಿದರು.ಕೆ ಕೆ ಪಿ ಸುದ್ದಿ 02