ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆ ಕೈಬಿಡಲು ರೈತರ ಆಗ್ರಹ

KannadaprabhaNewsNetwork |  
Published : May 23, 2026, 01:30 AM IST
ಕೆ ಕೆ  ಪಿ ಸುದ್ದಿ 01: ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ವಿರೋದಿಸಿ ರೈತರು ನಗರದ ಹೊರ ವಲಯದಲ್ಲಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು.  | Kannada Prabha

ಸಾರಾಂಶ

ಕನಕಪುರ: ರೈತರಿಗೆ ಮರಣ ಶಾಸನವಾಗಿರುವ ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ಕೈ ಬಿಡುವರೆಗೂ ಹೋರಾಟ ಮಾಡುವುದಾಗಿ ತೀರ್ಮಾನಿಸಿದ್ದೇವೆ ಎಂದು ರೈತ ಭರತ್ ಗೌಡ ಹೇಳಿದರು

ಕನಕಪುರ: ರೈತರಿಗೆ ಮರಣ ಶಾಸನವಾಗಿರುವ ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ಕೈ ಬಿಡುವರೆಗೂ ಹೋರಾಟ ಮಾಡುವುದಾಗಿ ತೀರ್ಮಾನಿಸಿದ್ದೇವೆ ಎಂದು ರೈತ ಭರತ್ ಗೌಡ ಹೇಳಿದರು. ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಯ ಭೂಸ್ವಾಧೀನ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳ ಹಿಂದೆ ಆರಂಭವಾದ ಈ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಕಡೆ ಭೂಮಿಯೂ ಇಲ್ಲ, ಆ ಕಡೆ ಪರಿಹಾರ ಹಣವೂ ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.

2015ರಲ್ಲಿ ಕೇಂದ್ರ ಸರ್ಕಾರ ಭಾರತ ಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಪ್ರಾಧಿಕಾರದಿಂದ ಬೆಂಗಳೂರು ನಗರ ಹಾಗೂ ಸುತ್ತಲಿನ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡುವ ಸದ್ದುದೇಶದಿಂದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಸುತ್ತ-ಮುತ್ತಲಿನ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 288 ಕೀಲೋ ಮೀಟರ್‌ ರಿಂಗ್ ರಸ್ತೆ ನಿರ್ಮಾಣಕ್ಕಾಗಿ 6 ಸಾವಿರ ರೈತರು ತಮ್ಮ ಜಮೀನು ಕಳೆದುಕೊಂಡು ಜೀವನ ಸಾಗಿಸಲು ಪರದಾಡುತ್ತಿದ್ದಾರೆಂದು ಆರೋಪಿಸಿದರು.

ಯೋಜನೆಯ ಸ್ವರೂಪ:

ಕನಕಪುರ, ರಾಮನಗರ, ಮಾಗಡಿ, ಸೂಲಿಬಲೆ, ದಾಬಸ್‌ಪೇಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್ ಸೇರಿದಂತೆ ತಮಿಳುನಾಡಿನ ಹೊಸೂರು ವ್ಯಾಪ್ತಿಯ ಕೆಲ ಪ್ರದೇಶ ಒಳಗೊಂಡಂತೆ ನೀಲನಕ್ಷೆ ಸಿದ್ದಪಡಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸುಮಾರು 370 ಹೆಕ್ಟೇರ್ ಪ್ರದೇಶವನ್ನೂ ಗುರುತಿಸಿ, ರೈತರಿಗೆ ಭೂ ಸ್ವಾಧೀನದ ನೋಟಿಸ್ ನೀಡಿ ರೈತರಿಂದ ಜಮೀನು ವಶಪಡಿಸಿಕೊಂಡಿದ್ದಾರೆ. ಕೋಲಾರ ಜಿಲ್ಲಾ ವ್ಯಾಪ್ತಿಯಿಂದ ದಾಬಸ್ ಪೇಟೆವರಗಿನ ಸುಮಾರು 120 ಕೀ.ಮಿ ಈಗಾಗಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೂ168 ಕಿಲೋ ಮೀಟರ್‌ ರಸ್ತೆ ಕಾಮಗಾರಿ ಬಾಕಿಯಿದೆ. ಆದರೆ ಭಾರತ ಮಾಲಾದವರು ಯೋಜನೆಯಿಂದ ಹಿಂದೆ ಸರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದರ ಹೊಣೆ ಹೊರಿಸಿ 4 ವರ್ಷ ಕಳೆದರೂ ಯಾವುದೇ ಪ್ರಗತಿ ಕಾಣದೆ ರೈತರು ಕಂಗಾಲಾಗಿದ್ದಾರೆಂದು ದೂರಿದರು.

ಹಣವೂ ಇಲ್ಲ, ಜಮೀನು ಇಲ್ಲ: ಯೋಜನೆ ಅನುಷ್ಠಾನಕ್ಕೆ ತಮ್ಮ ಜೀವನೋಪಾಯವಾಗಿದ್ದ ಜಮೀನುಗಳನ್ನು ಬಿಟ್ಟು ಕೊಟ್ಟ ರೈತರಿಗೆ ಕೇಂದ್ರ ಸರ್ಕಾರ ಪರಿಹಾರದ ಹಣವೂ ನೀಡದೇ ಜಮೀನೂ ವಶಪಡಿಸಿಕೊಂಡಿದ್ದು, ಅದನ್ನು ಮಾರಲಾಗದೆ ಸಮಸ್ಯೆ ಎದುರಿಸುವಂತಾಗಿದೆ. 10 ವರ್ಷಗಳ ಹಿಂದೆ ನಿಗದಿಪಡಿಸಿದ ಹಣವನ್ನು ಜಮೀನು ಹಾಗೂ ಮರಗಳಿಗೆ ನೀಡುತ್ತಿದ್ದು ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ಕೊಡುವ ಹಣದಲ್ಲಿ ಈ ಭಾಗದಲ್ಲಿ ಒಂದು ಕುಂಟೆ ಭೂಮಿ ತೆಗೆದುಕೊಳ್ಳಲು ಆಗುವುದಿಲ್ಲ. ಯೋಜನೆಯ ಶೇಕಡ 16ರಷ್ಟು ಹಣ ಮಾತ್ರ ರೈತರಿಗೆ ಬಂದಿದ್ದು ಉಳಿದ ಶೇ. 84ರಷ್ಟು ರೈತರಿಗೆ ಇನ್ನೂ ಒಂದೇ ಒಂದು ರೂಪಾಯಿ ಪರಿಹಾರ ಹಣ ಬಂದಿಲ್ಲವೆಂದು ಸಭೆಯಲ್ಲಿದ್ದ ರೈತರು ಅಳಲು ತೋಡಿಕೊಂಡರು.

ಮಾಜಿ ಪ್ರಧಾನಿ, ಸಚಿವ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಾಲಿ ಸಂಸದ ಡಾ.ಮಂಜುನಾಥ್ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸಂಸದರು ಲೋಕಸಭೆ ಅಧಿವೇಶನದಲ್ಲೇ ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಭಾಗದ ರೈತರು, ರೈತ ಸಂಘ, ವಿವಿಧ ಸಂಘಟನೆಗಳ ಬೆಂಬಲ ಪಡೆದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಸಭೆಯಲ್ಲಿ ನಾರಾಯಣಗೌಡ, ಪುಟ್ಟಸ್ವಾಮಿ, ಶ್ರೀಧರ್, ಮನ ಮೋಹನ್, ಜಿ.ಎಸ್.ವೆಂಕಟೇಶ್, ಗೋಪಾಲ್ ಗೌಡ, ಶಿವಲಿಂಗಯ್ಯ ಇತರರು ಭಾಗವಹಿಸಿದ್ದರು.

ಕೆ ಕೆ ಪಿ ಸುದ್ದಿ 01:

ಕೇಂದ್ರ ಸರ್ಕಾರದ ಸ್ಯಾಟಲೈಟ್ ರಿಂಗ್ ರಸ್ತೆ ನಿರ್ಮಾಣ ವಿರೋಧಿಸಿ ಕನಕಪುರ ಭಾಗದ ರೈತರು ಹೋರಾಟ ರೂಪಿಸಲು ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತೋತ್ಸವದಲ್ಲಿ ವಿವಿಧ ಕಲಾವಿದರಿಂದ ನಾದ ಝೇಂಕಾರ
ಉತ್ತಮ ಸಮಾಜ ನಿರ್ಮಾಣವೇ ಭೀಮ್‌ ಆರ್ಮಿ ಉದ್ದೇಶ