ಗದಗ: ನಗರದ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತತ್ವ ಇಲಾಖೆಯ ಅಧೀನದ ಸರಸ್ವತಿ ಮೂರ್ತಿಯನ್ನು ವಿರೂಪಗೊಳಿಸಿದ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜು. 10ರಂದು ದುಷ್ಕರ್ಮಿಗಳು ಮೂರ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಹಾನಿಗೊಳಿಸಿದ್ದರು. ಈ ಕುರಿತು ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ರೋಹನ್ ಜಗದೀಶ್ ಹಾಗೂ ಡಿಎಸ್ಪಿ ಮುತೂರ್ಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ನಡೆದ ತನಿಖೆಯಲ್ಲಿ ಆರೋಪಿಗಳಾದ ಬಾಳೇಶ ಕಳಸಣ್ಣವರ(30), ಆಸಿಫ್ ಭಾಗವಾನ್(40), ಬಸು ಸೇಂಡೂರು (25) ಮತ್ತು ರಾಜೇಸಾಬ್ ನದಾಫ್(63) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಾಗಿದ್ದಾರೆ.ಮಂತ್ರಸಿದ್ಧಿ ಪುಸ್ತಕದಿಂದ ಪ್ರೇರಣೆ: ಪೊಲೀಸರ ತನಿಖೆಯಲ್ಲಿ, ಪ್ರಮುಖ ಆರೋಪಿ ಬಾಳೇಶ ಕಳಸಣ್ಣವರ ಗದಗಕ್ಕೆ ಬಂದಿದ್ದ ವೇಳೆ ಒಂದು ಪುಸ್ತಕ ಮಳಿಗೆಯಲ್ಲಿ ಮಂತ್ರಸಿದ್ಧಿ ಎಂಬ ಪುಸ್ತಕ ಖರೀದಿಸಿ ಓದಿದ್ದ. ಅದರಲ್ಲಿನ ಮಾಹಿತಿಯಿಂದ ಪ್ರೇರಿತನಾಗಿ ಸರಸ್ವತಿ ಮೂರ್ತಿಯೊಳಗೆ ನಿಧಿಯಿದೆ ಎಂಬ ಮೂಢನಂಬಿಕೆ ಬೆಳೆಸಿಕೊಂಡಿದ್ದ.
ನಂತರ ತನ್ನ ಸಹಚರರೊಂದಿಗೆ ಸೇರಿ ಮೂರ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹಾನಿಗೊಳಿಸಿದ್ದಾನೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.ಪ್ರಕರಣಕ್ಕೆ ಬಳಸಿದ ಕಬ್ಬಿಣದ ಸಲಕರಣೆಗಳು ಹಾಗೂ ಆರೋಪಿಗಳು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರಶಂಸಿಸಿದ್ದಾರೆ.