ಹಾವೇರಿ: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮನೆ ಮನೆ ಭೇಟಿ ಆಗಸ್ಟ್ 8ರ ವರೆಗೆ ನಡೆಯಲಿದೆ. ಶೇ.100ರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. ಆ ಪೈಕಿ ಶೇ.72.89ರಷ್ಟು ಗಣಕೀಕರಣ ಮಾಡಲಾಗಿದ್ದು, ಗಣಕಿಕರಣದಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಪರಿಷ್ಕೃತ ವೇಳಾಪಟ್ಟಿ: ಬಿಎಲ್‌ಒ ಮನೆ ಮನೆ ಭೇಟಿ ಜೂ.30ರಿಂದ ಆ.8ರ ವರೆಗೆ, ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ, ಮರು ಜೋಡಣೆ ಆ.8ರಂದು, ಕರಡು ಮತದಾರರ ಪಟ್ಟಿಯ ಪ್ರಕಟಣೆ ಆ.17, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ಆ.17ರಿಂದ ಸೆ. 16ರವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ಸೂಚನೆ ಹಂತ, ವಿಲೇವಾರಿ ಆ.17ರಿಂದ ಅ.15ರ ವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅ.19ರಂದು ಪ್ರಕಟಣೆಯಾಗಲಿದೆ ಎಂದರು.

ಮನೆ ಮನೆ ಭೇಟಿ: ಯಾವುದೇ ಧಾರ್ಮಿಕ ಸ್ಥಳ, ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಒಗ್ಗೂಡಿಸಿ ವಿತರಣೆ ಅಥವಾ ಸಂಗ್ರಹಣೆ ಮಾಡಲು ಅವಕಾಶವಿರುವುದಿಲ್ಲ. ಆ.8ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ರಾಜಕೀಯ ಪಕ್ಷದಿಂದ ನೇಮಕಗೊಂಡ ಬಿಎಲ್‌ಎಗಳು ಒಂದುವೇಳೆ ಬದಲಾವಣೆಯಾದಲ್ಲಿ ಅಂದೇ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಶೇ.100ರಷ್ಟು ಸಾಧನೆ: ಜಿಲ್ಲೆಯಲ್ಲಿ ಈವರೆಗೆ 13,35,342 ಮತದಾರರಿದ್ದು, ನೂರಕ್ಕೆ ನೂರಷ್ಟು ಎನುಮರೇಷನ್ ನಮೂನೆ ವಿತರಣೆ ಮಾಡಲಾಗಿದೆ. 9,73,373 (ಶೇ.72.89) ಗಣಕೀಕರಣ ಮಾಡಲಾಗಿದೆ ಎಂದರು.


ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪ್ರತಿವಾರ ತಮ್ಮ ಕ್ಷೇತ್ರದ ತಾಲೂಕು ಕೇಂದ್ರ ಸ್ಥಾನದಲ್ಲಿ ತಾಲೂಕಿನ ರಾಜಕೀಯ ಪಕ್ಷದ ಮುಖಂಡರ ಸಭೆ ಜರುಗಿಸಿ, ಅಂಕಿ-ಅಂಶಗಳನ್ನು ನೀಡಲು ಹಾಗೂ ಸಭೆಯ ನಡುವಳಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈವರೆಗೆ 8,200 ಮರಣ, 200 ಸಂಗ್ರಹವಾಗದ, ಗೈರು, 7,032 ಶಾಶ್ವತ ವಲಸೆ, 3542 ದ್ವಿಪ್ರತಿ ಹಾಗೂ ಇತರೆ 28 ಸೇರಿ 19,002 ವಿವರಗಳನ್ನು ಕಲೆಹಾಕಲಾಗಿದೆ ಎಂದು ತಿಳಿಸಿದರು.

ಪ್ರತಿ ಮತಗಟ್ಟೆಯಲ್ಲಿ ವೋಟರ್ ಸ್ಪೆಷಲಿಸ್ಟ್ ಸೆಂಟರ್ ತೆರೆಯಲಾಗಿದೆ. ಎನುಮರೇಷನ್ ಫಾರ್ಮ ಭರ್ತಿ ಸೇರಿದಂತೆ ವಿವಿಧ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಬಿಎಲ್‌ಎಗಳು: ಕಾಂಗ್ರೆಸ್ ಪಕ್ಷದಿಂದ 1482, ಬಿಜೆಪಿದಿಂದ 1482 ಹಾಗೂ ಜೆಡಿಎಸ್ ಪಕ್ಷದಿಂದ 266 ಬಿಎಲ್‌ಎಗಳನ್ನು ನೇಮಕ ಮಾಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಸಂಜೀವಕುಮಾರ ನೀರಲಗಿ ಇತರರು ಇದ್ದರು.