ಗದಗ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಸತ್ತು ಹೋಗಿದೆ. ಸರ್ಕಾರ ಡ್ರಗ್ಸ್ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಡ್ರಗ್ಸ್ ಜಾಲದೊಂದಿಗೆ ಪೊಲೀಸ್ ಇಲಾಖೆ ಶಾಮೀಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ​​ರಾಜ್ಯದ ಶಾಲೆ- ಕಾಲೇಜುಗಳಿಂದ ಹಿಡಿದು ಜೈಲುಗಳವರೆಗೆ ಡ್ರಗ್ಸ್ ಮಾರಾಟದ ಜಾಲ ವ್ಯಾಪಿಸಿದೆ. ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಪೊಲೀಸರು ಬಂದು ಇಲ್ಲಿನ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚುತ್ತಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಮಾತ್ರ ಅಸಹಾಯಕರಾಗಿದ್ದಾರೆ ಎಂದರು.

ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಕರ್ನಾಟಕವು ಡ್ರಗ್ಸ್ ಮ್ಯಾನುಫ್ಯಾಕ್ಚರಿಂಗ್ ಸೆಂಟರ್ ಆಗಿದೆ ಎಂದು ಹೇಳಿಕೆ ನೀಡುವ ಪರಿಸ್ಥಿತಿ ಬಂದಿದೆ ಎಂದರೆ ಇಲ್ಲಿನ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಕೆಳಮಟ್ಟದ ಪೊಲೀಸ್ ಇಲಾಖೆಗೆ ಈ ಜಾಲದ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿರುವುದನ್ನು ನೋಡಿದರೆ, ಅವರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಗಲು ಹೊತ್ತಿನಲ್ಲೇ ಕೊಲೆ, ಅತ್ಯಾಚಾರ, ಗ್ಯಾಂಗ್ ರೇಪ್‌ಗಳಂತಹ ಅಪರಾಧಗಳು ನಿರಂತರವಾಗಿ ನಡೆಯುತ್ತಿವೆ. ಅಪರಾಧಿಗಳಿಗೆ ಕಾನೂನು ಮತ್ತು ಪೊಲೀಸರ ಭಯವೇ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಇತರ ಕೆಲಸಗಳನ್ನು ಬದಿಗಿಟ್ಟು ಬರ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆಯತ್ತ ಗಮನ ಹರಿಸಬೇಕು ಎಂದರು.

ಬಿಡದಿ ಹೋರಾಟಕ್ಕೆ ತಮ್ಮ ಬೆಂಬಲವಿದ್ದು, ತಮ್ಮ ಕ್ಷೇತ್ರದಲ್ಲಿ ಮೊದಲೇ ನಿಗದಿಯಾಗಿದ್ದ ಕೆಎಲ್‌ಇ ಸಂಸ್ಥೆಯವರು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರಣ ತಾವು ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೇ, ಲಡಾಖ್‌ನ ಸೋನಂ ವಾಂಗ್ಚೂಕ್ ಅವರ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರ ನಿಗಾ ಇರಿಸಿದ್ದು, ಅವರು ಆದಷ್ಟು ಬೇಗ ಉಪವಾಸ ಕೈಬಿಡಲಿ ಎಂಬುದು ಎಲ್ಲರ ಆಶಯವಾಗಿದೆ ಎಂದರು.


ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಬಿಡದಿ ವಿಚಾರದ ಸಂಘರ್ಷದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಕನಸು ಮತ್ತು ಯೋಜನೆಯನ್ನು ಸಾಕಾರಗೊಳಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಏಕೆ ಇಷ್ಟೊಂದು ಆಸಕ್ತಿ? ಕುಮಾರಸ್ವಾಮಿಯವರು ಸಿಎಂ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಈಗ ಇವರು ರೈತರ ಸಾಲ ಮನ್ನಾ ಮಾಡುತ್ತಾರಾ? ಕುಮಾರಸ್ವಾಮಿಯವರ ಕನಸಿನಲ್ಲಿ ಹೊಕ್ಕು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಜಿಲ್ಲಾ ಬಿಜೆಪಿ ಮುಖಂಡರು ಇದ್ದರು.