ರೋಣ: ಶೈವ ದೇಗುಲಗಳ ತೊಟ್ಟಿಲಾದ ಪಟ್ಟಣದಲ್ಲಿರುವ ಐತಿಹಾಸಿಕ ದೇಗುಲಗಳ ಪೈಕಿ 3 ದೇಗುಲಗಳನ್ನು ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅನುದಾನ ₹4.50 ಕೋಟಿ ವೆಚ್ಚದಲ್ಲಿ ಸಂರಕ್ಷಣೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
10ನೇ ಶತಮಾನದಲ್ಲಿ ನಿರ್ಮಿಸಲಾದ ಐತಿಹಾಸಿಕ ರಾಮಲಿಂಗೇಶ್ವರ ದೇಗುಲ, ಅನಂತಶಯನ ದೇಗುಲ ಮತ್ತು ಈಶ್ವರ ದೇಗುಲ, ಕಲ್ಯಾಣಿಯನ್ನು ತಲಾ ₹1.5 ಕೋಟಿ ವೆಚ್ಚದಲ್ಲಿ ದೇಗುಲ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಸಂರಕ್ಷಿಸಲು ಜೀರ್ಣೋದ್ಧಾರ ಮಾಡಲಾಗುವುದು. ಮುಂದಿನ ಹಂತದಲ್ಲಿ ಇನ್ನುಳಿದ ಐತಿಹಾಸಿಕ ಸೋಮನಾಥೇಶ್ವರ, ಕಲ್ಲಿನಾಥೇಶ್ವರ, ಮಲ್ಲಿನಾಥೇಶ್ವರ ದೇಗುಲ ಸೇರಿದಂತೆ ಪ್ರತಿಯೊಂದು ಐತಿಹಾಸಿಕ ದೇಗುಲಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
₹38 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಶಾಲೆ: ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರೋಣದಲ್ಲಿ ಲೋಕನಗೌಡ್ರ ಪ್ಲಾಟ್ ಸಮೀಪ 6 ಎಕರೆ ಪ್ರದೇಶದಲ್ಲಿ ₹38 ಕೋಟಿ ವೆಚ್ಚದಲ್ಲಿ ಕಾರ್ಮಿಕರ ವಸತಿ ಶಾಲೆ ನಿರ್ಮಿಸಲಾಗುವುದು. ಈಗಾಗಲೆ ಟೆಂಡರ್ ಕರೆಯಲಾಗಿದೆ. ರೋಣ ಮಧ್ಯೆಭಾಗದಲ್ಲಿರುವ ಕೆರೆಯನ್ನು ಪ್ರವಾಸಿ ತಾಣವಾಗಿಸುವಲ್ಲಿ ₹2 ಕೋಟಿ ವೆಚ್ಚದಲ್ಲಿ ನೀಲನಕ್ಷೆ ತಯಾರಿಸಿದ್ದು, ಈಗಾಗಲೆ ₹1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದ ಸೌಂದರ್ಯ ಹೆಚ್ವಿಸಲು, ಕೆರೆಯನ್ನು ಪ್ರವಾಸಿ ತಾಣ ಮಾಡುವಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ಕೆ ಜನತೆ ಸಹಕಾರ ಮುಖ್ಯವಾಗಿದೆ ಎಂದರು.ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಐತಿಹಾಸಿಕ ದೇಗುಲಗಳ ಮೂಲ ಆಕಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲಾಗುವುದು. ಶೇ. 50ರಿಂದ 75ರಷ್ಟು ಹಾನಿಯಾದ ಕಲ್ಲುಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ಅದೇ ಮಾದರಿಯಲ್ಲಿ ಕಲ್ಲುಗಳನ್ನು ಅಳವಡಿಸಲಾಗುವುದು ಎಂದರು.