ಯಲಬುರ್ಗಾ: ಬಂಜಾರ ಸಮುದಾಯದವರು ಶಿಕ್ಷಣ ಪಡೆದು ವಿದ್ಯಾವಂತರಾಗುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಪಂ ಮಾಜಿ ಸದಸ್ಯ ಪರಸಪ್ಪ ನಾಯಕ ಮಾತನಾಡಿ, ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು. ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಗೊಳ್ಳಬೇಕಾದರೆ ಸರ್ಕಾರ ಸಮುದಾಯಕ್ಕೆ ವಿಶೇಷ ಅನುದಾನ ನೀಡಬೇಕು ಎಂದರು.
ಅದ್ಧೂರಿ ಮೆರವಣಿಗೆ: ಚಿಕ್ಕಮ್ಯಾಗೇರಿ ತಾಂಡಾದಲ್ಲಿ ಸೇವಾಲಾಲ ಜಯಂತಿ ಹಾಗೂ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ತ ಬಂಜಾರ ಸಮಾಜದ ಮಹಿಳೆಯರಿಂದ ಕುಂಭ ಕಳಸದ ಅದ್ಧೂರಿ ಮೆರವಣಿಗೆ ನಡೆಯಿತು. ಲಂಬಾಣಿಗರ ಜನಪದ ಹಾಡುಗಳಿಗೆ ಸಮಾಜದ ಯುವತಿ-ಯುವಕರು ನೃತ್ಯ, ಸಾಂಪ್ರದಾಯಿಕ ಬಟ್ಟೆ ತೊಟ್ಟು ಹೆಜ್ಜೆ ಹಾಕಿದ್ದು, ನೋಡುಗರ ಗಮನ ಸೆಳೆಯಿತು. ಶ್ರೀ ದುರ್ಗಾದೇವಿ ಮೂರ್ತಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು.ತಾಪಂ ಮಾಜಿ ಸದಸ್ಯ ಟೋಪಣ್ಣ ನಾಯಕ, ರಾಮಣ್ಣ ನಾಯಕ, ದೇವಪ್ಪ ಪೂಜಾರ, ಉಮೇಶ ನಾಯಕ, ಈರಪ್ಪ ರಾಠೋಡ, ಕೃಷ್ಣ ನಾಯಕ, ತಿರುಪತಿ ನಾಯಕ, ಮುತ್ತಪ್ಪ ಮೇಸಣಗೇರಿ, ರಾಮಪ್ಪ ನಾಯಕ, ಶೇಖಪ್ಪ ಚವ್ಹಾಣ, ರತ್ನಪ್ಪ ನಾಯಕ, ನೀಲಪ್ಪ ಕಾರಬಾರಿ, ಲಿಂಬಪ್ಪ ಹಾಗೂ ಸಮಾಜದ ಗುರು-ಹಿರಿಯರು, ಯುವಕರು ಇದ್ದರು.