ಕನ್ನಡಪ್ರಭ ವಾರ್ತೆ ಮಡಿಕೇರಿ
ಉತ್ತಮ ಪರಿಸರ ಸಂರಕ್ಷಣೆ ಹಾಗೂ ಜೀವ ಸಂಕುಲದ ಉಳಿವಿಗೆ ಬೇಕಾದ ಶುದ್ಧ ಆಮ್ಲಜನಕ ಒದಗಿಸಿ ಪರಿಸರ ಸಮತೋಲನ ಕಾಪಾಡಿಕೊಂಡು ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.ಮಡಿಕೇರಿ ತಾಲೂಕಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಮೂಲ ತರಬೇತಿ ಹಾಗೂ ಮುಂದುವರಿದ ತರಬೇತಿಯ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪರಿಸರ ಸಂಭ್ರಮ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಅರಣ್ಯ ಇಲಾಖೆಯ ಮಡಿಕೇರಿ ವಲಯ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.ಕೊಡಗಿನಲ್ಲಿ ಉತ್ತಮ ಮಳೆ ಬಿದ್ದು ಜೀವನದಿ ಕಾವೇರಿ ತುಂಬಿ ಹರಿದರೆ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ನಾಡಿನ ಜನತೆಯ ನೀರಿನ ಬವಣೆ ಸಾಧ್ಯ. ಈ ದಿಸೆಯಲ್ಲಿ ಉತ್ತಮ ಮಳೆ ಪಡೆಯುವ ಸಲುವಾಗಿ ನಾವು ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಕೊಡಗಿನ ಅರಣ್ಯ, ಪರಿಸರ ಹಾಗೂ ಕಾವೇರಿ ನದಿಯನ್ನು ಸಂರಕ್ಷಿಸುವ ಮೂಲಕ ಇಡೀ ಜೀವ ಸಂಕುಲವನ್ನು ಸಂರಕ್ಷಿಸಬೇಕಿದೆ ಎಂದು ಸಿಂಧ್ಯಾ ನುಡಿದರು.
ಪರಿಸರ ಜಾಗೃತಿ ಆಂದೋಲನದ ಕುರಿತು ಮಾತನಾಡಿ ಪರಿಸರ ಪ್ರತಿಜ್ಞೆ ಬೋಧಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೂ ಆದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮ ಕುಮಾರ್, ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಹೆಚ್ಚು ಸಸಿನೆಟ್ಟು ಬೆಳೆಸುವ ಮೂಲಕ ನೆಲ- ಜಲ ಸಂರಕ್ಷಣೆ, ಜೀವಿ- ವೈವಿಧ್ಯ ಹಾಗೂ ನೀರಿನ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಶಾಲೆಯಲ್ಲಿ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಸಂಘಟಿತ ಪ್ರಯತ್ನ ಅಗತ್ಯ ಎಂದರು.ಪಶ್ಚಿಮಘಟ್ಟ ಪ್ರದೇಶದಲ್ಲಿನ ಜೀವ ವೈವಿಧ್ಯ ಸೂಕ್ಷ್ಮ ತಾಣಗಳಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ವೈವಿಧ್ಯವಿದ್ದು, ಇವುಗಳ ಸಂರಕ್ಷಣೆಗೆ ಎಲ್ಲರೂ ಸಂಘಟಿತ ಪ್ರಯತ್ನ ಪಡಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲ ಪಂಕಜಾಕ್ಷನ್, ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆಯೂ ಆಗಿರುವ ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಸ್ಥಾನಿಕ ಆಯುಕ್ತ ಎಚ್.ಆರ್. ಮುತ್ತಪ್ಪ,ಸಂಸ್ಥೆಯ ಬೊಳ್ಳಜಿರ ಬಿ. ಅಯ್ಯಪ್ಪ, ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನಾ, ಮಡಿಕೇರಿ ವಲಯದ ಡಿಆರ್‌ಎಫ್‌ಒ ಸುನಿಲ್ ಗುನಗಾ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಅಲೀಮ, ಉಷಾರಾಣಿ, ಶಿವಶಂಕರಪ್ಪ, ಟಿ.ಬಿ. ಕುಮಾರಸ್ವಾಮಿ, ಮೈಥಿಲಿರಾವ್, ಕೆ.ಯು. ರಂಜಿತ್, ವಾಮನ, ಸಿ.ಎಂ. ಸುಲೋಚನಾ, ಭೋಜಮ್ಮ, ವೀಣಾ, ಗಣೇಶ್, ಭೀಮಯ್ಯ, ಗ್ರಾ.ಪಂ. ಸದಸ್ಯ ಡೀನ್ ಬೋಪಣ್ಣ, ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ. ಧನಂಜಯ ಇತರರು ಇದ್ದರು.
ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಸುನಿಲ್ ಗುನಗಾ, ಅರಣ್ಯ ವೀಕ್ಷಕರಾದ ವಾಸುದೇವ್, ಮಹೇಶ್, ರವಿ ಶಿಕ್ಷಕರೊಂದಿಗೆ ಜತೆಗೂಡಿ 30ಕ್ಕೂ ನೆಡುವ ಕಾರ್ಯಕ್ರಮಕ್ಕೆ ಸಹಕರಿಸಿದರು.ತರಬೇತಿ ನಿರತ ಶಿಕ್ಷಕರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪರಿಸರ ಘೋಷಣೆಗಳ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಕೂಗಿದರು. ಹಸಿರೇ ಉಸಿರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಪಶ್ಚಿಮಘಟ್ಟಗಳ ಸಂರಕ್ಷಣೆ ಎಲ್ಲರ ಹೊಣೆ, ಬೈಸಿಕಲ್ ಬಳಸಿ ಮಾಲಿನ್ಯ ತಡೆಯಿರಿ, ಜೀವನದಿ ಕಾವೇರಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.