ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿಜಿಎಸ್ ಶಿಕ್ಷಣ ಮಹಾ ವಿದ್ಯಾಲಯದ ಸಮಾಜ ವಿಜ್ಞಾನ, ಇಕೋ ಕ್ಲಬ್ ಮತ್ತು ಎನ್‌ಎಸ್‌ಎಸ್ ಘಟಕದಿಂದ ಆಯೋಜಿಸಿದ್ದ ಜಲ-ವನ ಮಹೋತ್ಸವದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಮುತ್ತ ಗಿಡ ಮರ ಬೆಳೆಸಿದರೆ ನೈರ್ಮಲ್ಯದ ಅರಿವು ನಿಮ್ಮನ್ನು ಪರಿಸರ ಪ್ರೇಮಿಯಾಗಿಸಿ ಪರಿಸರ ರಕ್ಷಕನಾಗಲು ಪ್ರೇರೇಪಿಸುತ್ತದೆ ಎಂದರು.
ಸಾರಿಗೆ ಬಸ್‌ಗಳ ಹಿಂದೆ ಬರೆಸಿರುವ ಪ್ರಾಣಿಗಳ ಮೇಲೆ ದಯೆಯಿರಲಿ ಎಂಬ ವಾಕ್ಯವನ್ನು ಅಂತರಾಳದಿಂದ ಸ್ವೀಕರಿಸಿ ಅಮೂಲ್ಯ ಜೀವಕ್ಕೆ ಬೆಲೆ ನೀಡಬೇಕಿದೆ. ಈ ಜಾಗೃತಿ ಆಚರಣೆಗಳು ಕಾರ್ಯರೂಪಕ್ಕೆ ಬಂದರೆ ಮಾತ್ರ ಸಂಕಲ್ಪ ಮತ್ತು ಫಲಿತಾಂಶಕ್ಕೆ ಮೌಲ್ಯ ಸಿಗುತ್ತದೆ ಎಂದರು.ದಿನಾಚರಣೆಗಳು ಕೇವಲ ಸಾಂಕೇತಿಕ. ಆದ್ದರಿಂದ ಪರಿಸರವನ್ನು ಕಾಪಾಡುವ ಮನೋಭಾವ ಅಗತ್ಯ ಎಂಬುದನ್ನು ಅರಿತು ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಬಿಜಿಎಸ್ ವನ ಸಂವರ್ಧನ ಟ್ರಸ್ಟ್ ಸ್ಥಾಪಿಸಿ ಐದು ಕೋಟಿ ಗಿಡ ನೆಡುವ ಅಭಿಯಾನವನ್ನು ನಾಡಿನಾದ್ಯಂತ ಹಮ್ಮಿಕೊಂಡರು ಎಂದರು.
ಮಾಯಸಂದ್ರದ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್. ಶಿವಲಿಂಗೇಗೌಡ ಮಾತನಾಡಿ, ಸಕಲ ಜೀವಿ ಮತ್ತು ಸಸ್ಯಗಳಿಗೆ ಅತ್ಯಮೂಲ್ಯ ಜೀವ ಸೆಲೆಯಾದ ನೀರು ಮತ್ತು ಅರಣ್ಯವನ್ನು ಸಂರಕ್ಷಿಸಬೇಕಿದೆ. ಭೂ ಮಂಡಲದಲ್ಲಿ ನೀರು ಮತ್ತು ಭೂಮಿ ಪ್ರಮಾಣ ಅದರಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಎಷ್ಟಿದೆ ಎಂಬುದನ್ನು ಅರಿತು ಜಲ ಮತ್ತು ಅರಣ್ಯ ಸಂಪತ್ತನ್ನು ಕಾಪಾಡಬೇಕು ಎಂದರು.
ಜಲ-ವನ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಆಶುಭಾಷಣ, ಚರ್ಚಾಸ್ಪರ್ಧೆ, ಪೋಸ್ಟರ್ ಮೇಕಿಂಗ್, ರಂಗೋಲಿ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.