ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾ.ನಗರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಭೂ ಪುನಶ್ಚೇತನ, ಅರಣ್ಯೀಕರಣ ಮತ್ತು ಬರ ಸಹಿಷ್ಣುತೆ ಘೋಷ ವಾಕ್ಯದೊಂದಿಗೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಸಸ್ಯ ಸಂಕುಲದ ಬೆಳವಣಿಗೆ ಮತ್ತು ನಿರ್ವಹಣೆ ಆಗಿದ್ದು, ಇದಕ್ಕೆ ಆದ್ಯತೆ ನೀಡುವ ಅತ್ಯವಶ್ಯಕತೆ ಇದೆ. ಜಾಗತಿಕ ತಾಪಮಾನ ಏರಿಕೆಯಿಂದ ಬೆಳೆ ಉತ್ಪಾದನೆಯಲ್ಲಿ ಏರುಪೇರು ಮತ್ತು ಮಾನವ ಆರೋಗ್ಯ ಅಸಮತೋಲನವಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣೆ ಮತ್ತು ನಿರ್ವಹಣಾ ಕ್ರಮಗಳನ್ನು ವೈಜ್ಞಾನಿಕ ಶಿಫಾರಸ್ಸಿನ ಮೇರೆಗೆ ಅನುಸರಿಸಬೇಕೆಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ ಮಾತನಾಡಿ, ಕೈಗಾರೀಕರಣ, ಮಾನವಪೂರಿತ ಚಟುವಟಿಕೆಗಳಿಂದ ಪರಿಸರ ನಶಿಸುತ್ತಿದ್ದು, ಇವುಗಳನ್ನು ಸರಿದೂಗಿಸಲು ವಿಶ್ವ ಪರಿಸರ ದಿನಾಚರಣೆ ಪೂರಕ. ಈ ವಿಶೇಷ ದಿನಗಳನ್ನು ಸದ್ಭಳಕೆ ಮಾಡಿಕೊಂಡು ಸಸ್ಯ ಸಂಕುಲವನ್ನುಸಮೃದ್ಧಗೊಳಿಸಿ ಕಾಪಾಡಿಕೊಳ್ಳಲು ತಿಳಿಸಿದರು. ಮಣ್ಣು ಮತ್ತು ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಶಿಫಾರಸ್ಸಿನ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಈ ಸಂಪನ್ಮೂಲಗಳನ್ನು ಸಂರಕ್ಷಿಸಿ ಕೃಷಿ ಭೂಮಿಯ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.ಹರದನಹಳ್ಳಿ ಪ್ರಗತಿಪರ ಸಮಗ್ರ ಕೃಷಿಕ ಮತ್ತು ಗ್ರಾಪಂ ಸದಸ್ಯ ಮಂಜುನಾಥ್ ಅವರು ರೈತರು ತಮ್ಮ ಜಮೀನುಗಳಲ್ಲಿ ಅರಣ್ಯ ಸಸ್ಯಗಳನ್ನು ಬೆಳೆಸುವುದರಿಂದ ಜಾನುವಾರುಗಳ ಮೇವು ನಿರ್ವಹಣೆ ಮತ್ತು ಮಣ್ಣು ನೀರಿನ ಸಂರಕ್ಷಣೆ ಮಾಡಬೇಕು. ನಮ್ಮ ಗ್ರಾಪಂ ಅಲ್ಲೂ ಕೃಷಿ ವಿಜ್ಞಾನ ಕೇಂದ್ರದಿಂದ ಸಸ್ಯಗಳನ್ನು ಪಡೆದು ಅವುಗಳನ್ನು ನೆಡುತ್ತಿರುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್, ಜಿ.ಎಸ್. ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಉದ್ದೇಶಗಳನ್ನು ತಿಳಿಸಿ, ಸಾವಿರ ಸಸಿಗಳನ್ನು ಈ ಕಾರ್ಯಕ್ರಮದ ನಿಮಿತ್ತ ನೆಡುವ ಯೋಜನೆ ಕೈಗೊಳ್ಳಲಾಗಿದ್ದು ಇದಕ್ಕಾಗಿ ಜಿಲ್ಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಯ್ದ ಗ್ರಾಮಗಳಲ್ಲಿ ಒಂದೇ ದಿನದಂದು ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಚಂದ್ರಶೇಖರ್, ಎಸ್.ಕಳ್ಳೀಮನಿ, ಡಾ.ಮೋಹನ್ ಕುಮಾರ್, ಡಾ.ದೀಪ,ಜೆ ಡಾ.ಪಂಪನಗೌಡ,ಬಿ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಿಗೆ, ಕೃಷಿ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಪರಿಸರ ಸಮತೋಲನ, ಜೀವವೈವಿಧ್ಯತೆ ನಿರ್ವಹಣೆ ಮತ್ತು ಸುಧಾರಿತ ಬೇಸಾಯ ಪದ್ಧತಿಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಒದಗಿಸಿದರು.
ಕಾರ್ಯಕ್ರಮದಲ್ಲಿ ಚಾ.ನಗರ ತಾಲೂಕಿನ ಹರದನಹಳ್ಳಿ, ಕೋಟಂಬಳ್ಳಿ, ಹೊಮ್ಮ, ಬೂದಿಪಡಗ, ಕೊಡಿಉಗನೆ, ವಿ.ಛತ್ರ ಗ್ರಾಮದ ರೈತರು ಭಾಗವಹಿಸಿದ್ದರು. ಪ್ರಸ್ತುತ ಮುಂಗಾರು ಆರಂಭವಾಗಿರುವುದರಿಂದ, ಮುಂಗಾರಿಗೆ ಕೈಗೊಳ್ಳಬಹುದಾದ ಸೂಕ್ತ ಮತ್ತು ವೈಜ್ಞಾನಿಕ ಬೇಸಾಯ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ರೈತ ವಿಜ್ಞಾನಿಗಳ ಚರ್ಚೆಯನ್ನು ಸಹ ಕೈಗೊಂಡು, ರೈತರು ತಿಳಿಸಿದ ಹಲವಾರು ಕೃಷಿ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸಿಕೊಡಲಾಯಿತು. ಕೃಷಿಯಲ್ಲಿ ವಿನೂತನ ಹಾಗೂ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಗ್ರ ಕೃಷಿಯನ್ನು ಪಾಲಿಸಿ, ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಂಡ ಆಯ್ದ ರೈತರಿಗೆ ಅಭಿನಂದನಾ ಸಮಾರಂಭವನ್ನು ಕೈಗೊಂಡು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಸುಮಿತ್ರ ಪ್ರಾರ್ಥನೆ ಮಾಡಿದರು, ಅನನ್ಯ ನಿರೂಪಿಸಿದರು, ಡಾ.ದೀಪ ಸ್ವಾಗತಿಸಿ ವಂದಿಸಿದರು.