ಬೆಂಗಳೂರು : ಪ್ರಿಯಕರನ ಜತೆ ಸೇರಿ ಮಗಳನ್ನು ಕೊಂದ ಆರೋಪದಲ್ಲಿ ತಾಯಿಯನ್ನು ಕಾಡುಗೋಡಿ ಠಾಣೆ ಪೊಲೀಸರು 7 ದಿನಗಳ ಬಳಿಕ ಸಕಲೇಶಪುರದಲ್ಲಿ ಬಂಧಿಸಿದ್ದಾರೆ.
ಮಗಳು ವೆನ್ನೆಲ್ಲಾಳನ್ನು (5) ಕೊಲೆ ಮಾಡಿದ ಆರೋಪದ ಮೇಲೆ ವಕೀಲೆಯಾಗಿರುವ ಪ್ರಿಯಾಂಕಳನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಈಕೆಯ ಪ್ರಿಯಕರ ರಿಯಲ್ ಎಸ್ಟೇಟ್ ಉದ್ಯಮಿ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದರು.
ಜೂ.ರಂದು ಪ್ರಿಯಾಂಕ ಪತಿ ಪ್ರವೀಣ್ ಅವರು ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮೇಲೆ ದೂರು ದಾಖಲಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೋಹನ್‌ನನ್ನು ಬಂಧಿಸಿದ್ದರು. ಪ್ರಕರಣ ದಾಖಲಾಗುತ್ತಿದಂತೆ ಪ್ರಿಯಾಂಕ ತಲೆಮರೆಸಿಕೊಂಡಿದ್ದರು. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಸಕಲೇಶಪುರದಲ್ಲಿ ಸ್ನೇಹಿತನ ಮನೆಯಲ್ಲಿ ಅಡಗಿದ್ದ ಪ್ರಿಯಾಂಕ ಅವರನ್ನು ಬಂಧಿಸಿದೆ. ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಪ್ರಿಯಾಂಕಳನ್ನು ವಶಕ್ಕೆ ಪಡೆದು ನಂತರ ಆಕೆಗೆ ಕಾನೂನು ಬದ್ಧವಾಗಿ ನೋಟಿಸ್ ನೀಡಿ ಅಧಿಕೃತವಾಗಿ ಬಂಧಿಸಲಾಗಿದೆ.
ಡಿಜಿಟಲ್ ಸಂಪರ್ಕ ಕಡಿತ:
ಪ್ರಿಯಾಂಕ ಮೊದಲು 3 ದಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಆಶ್ರಯ ಪಡೆದಿದ್ದಳು. ಬಳಿಕ 4 ದಿನ ಸಕಲೇಶಪುರದಲ್ಲಿರುವ ಚಿರಂತ್ ಎಂಬ ಸ್ನೇಹಿತ ತೋಟದ ಮನೆಯಲ್ಲಿದ್ದಳು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ತನ್ನ ಚಲನವಲದ ಸುಳಿವು ಪೊಲೀಸರಿಗೆ ಸಿಗಬಾರದೆಂದು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುತ್ತಿರಲಿಲ್ಲ. ಒಟ್ಟಾರೆ ಡಿಜಿಟಲ್ ಸಂಪರ್ಕವನ್ನು ಕಡಿತಗೊಳಿಸಿದ್ದಳು. ಆದರೆ ಆರೋಪಿ ಮೋಹನ್ ನೀಡಿದ ಮಾಹಿತಿ ಆಧರಿಸಿ ಪ್ರಿಯಾಂಕಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ನಡೆದ ಕೊಲೆ ವಿದೇಶದಲ್ಲಿ ಪತ್ತೆ:
ಪ್ರಿಯಾಂಕಾ ಮತ್ತು ಪ್ರವೀಣ್ ದಂಪತಿಯ 2ನೇ ಪುತ್ರಿ ವೆನ್ನೆಲಾ ಮಾ.24ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಈ ಸಂಬಂಧ ಪ್ರಿಯಾಂಕ ಸಹೋದರ ನೀಡಿದ ದೂರಿನನ್ವಯ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿತ್ತು. ಪ್ರವೀಣ್ ಅವರು ಇಂಗ್ಲೆಂಡಿನಲ್ಲಿ ಮಕ್ಕಳ ತಜ್ಞೆಯಾಗಿರುವ ತನ್ನ ಸಹೋದರಿ ಪೂರ್ಣಿಮ ಪಾಂಡೆ ಅವರಿಗೆ ಪುತ್ರಿ ವೆನ್ನಲಾಳ ಮೃತದೇಹ ಪರೀಕ್ಷಾ ವರದಿ ಕಳುಹಿಸಿದ್ದರು. ಅವರು ಅದನ್ನು ಪರಾಮರ್ಶಿಸಿ ಈ ಸಂಬಂಧ ಠಾಣೆಗೆ ತೆರಳಿ ದೂರು ನೀಡುವಂತೆ ಹೇಳಿದ್ದರು. ಪ್ರವೀಣ್ ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲು ಮೋಹನ್‌ನನ್ನು ನಂತರ ಪ್ರಿಯಾಂಕಳನ್ನು ಬಂಧಿಸಿದ್ದಾರೆ.
ಕೊಲೆ ಮಾಡಿ ನಾಟಕವಾಡಿದ್ದರು:
ಪ್ರಿಯಾಂಕಾ ಆರಂಭದಲ್ಲಿ ಮಗುವಿಗೆ ಬಿರಿಯಾನಿ ಮತ್ತು ಐಸ್‌ಕ್ರೀಂ ತಿನ್ನಿಸಿ, ಕಾರಿನಲ್ಲಿ ಎಸಿ ಹಾಕಿ ಕಿಟಕಿಗಳನ್ನು ಮುಚ್ಚಿ ಮಲಗಿಸಿದ್ದೆ ಇದರಿಂದಲೇ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಳು. ಆದರೆ ಆರೋಪಿ ಮೋಹನ್ ವಿಚಾರಣೆ ವೇಳೆ ವೆನ್ನೆಲಾ ಅಳುತ್ತಿದ್ದಾಗ ಆಕೆಯ ಹೊಟ್ಟೆಗೆ ಮೊಣಕೈಯಿಂದ ಹೊಡೆದು, ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಒಪ್ಪಿಕೊಂಡಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ.
ತನಿಖಾಧಿಕಾರಿಯ ಕರ್ತವ್ಯ ಲೋಪ?
ವೆನ್ನಿಲಾ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯ ಕರ್ತವ್ಯ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ. ಮಗು ಹತ್ಯೆ ಪ್ರಕರಣವನ್ನು ಕಾಡುಗೋಡಿಯ ಠಾಣೆಯಲ್ಲಿ ಈ ಹಿಂದೆ ಇನ್‌ಸ್ಪೆಕ್ಟರ್ ಆಗಿದ್ದ ರಂಗಸ್ವಾಮಿ ಹಗುರವಾಗಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ವೈಯಕ್ತಿಕ ಲಾಭಕ್ಕಾಗಿ ಆರೋಪಿಗಳ ಪರ ನಿಂತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ಆದರೆ ಸ್ಥಳ ಪರಿಶೀಲನೆ ಮಾಡಿ ಸಾಕ್ಷ್ಯ ಕಲೆ ಹಾಕಲು ವಿಫಲರಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಮತ್ತು ಪಿಎಸ್‌ಐ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾಗಿದೆ. ಹೀಗಾಗಿ ಮಹದೇವಪುರ ಉಪ ವಿಭಾಗ ಎಸಿಪಿಯಿಂದ ಡಿಸಿಪಿ ಸೈದುಲು ಅಡಾವತ್ ವರದಿ ಕೇಳಿದ್ದರು. ಆ ವರದಿಯಲ್ಲಿ ಕಾಡುಗೋಡಿ ಪೊಲೀಸರ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
