ಕನ್ನಡಪ್ರಭ ವಾರ್ತೆ ಹಿರಿಯೂರು

ಭಾರತೀಯ ಜನತಾ ಪಕ್ಷದ ಹಿರಿಯೂರು ಮಂಡಲದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಶ್ರೀ ಕೂಡಲಸಂಗಮೇಶ್ವರ ದೇವಾಲಯದ ಆವರಣದಲ್ಲಿ ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಎಂಬ ವಿಶೇಷ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಡಲ ಅಧ್ಯಕ್ಷ ಅಭಿನಂದನ್, ದೇಶದ ಪ್ರಧಾನಮಂತ್ರಿ ಅವರ 12 ವರ್ಷಗಳ ಜನಸೇವೆಯ ಸಾಧನೆಯ ಸಂಭ್ರಮದ ಅಂಗವಾಗಿ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂಬ ಸಂದೇಶ ನೀಡಲಾಗಿದೆ. ತಾಯಿ ನಮಗೆ ಜೀವ ನೀಡಿದರೆ ಮರಗಳು ಜೀವ ಉಳಿಸುತ್ತವೆ. ಆದ್ದರಿಂದ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಪರಿಸರದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಉಮೇಶ್, ರೈತ ಮೋರ್ಚಾ ಅಧ್ಯಕ್ಷ ಮನೋಹರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸಿದ್ದಮ್ಮ, ಮುಖಂಡರಾದ ನಾಗರಾಜ್, ರಂಗಸ್ವಾಮಿ, ಮೂಡ್ಲಪ್ಪ, ವೀರೇಶ್, ಗೋವಿಂದಪ್ಪ, ನಾರಾಯಣ ಭೋವಿ, ಮಾರುತಿ, ಜಯರಾಮ್, ಶಿವಲಿಂಗಪ್ಪ, ಚಿಕ್ಕಣ್ಣ, ರಂಗನಾಥ್, ವೈಕುಂಠಪ್ಪ, ನಾಗೇಂದ್ರಪ್ಪ, ಕೃಷ್ಣ,ಪ್ರದೀಪ್, ರಾಕೇಶ್ ಮುಂತಾದವರು ಉಪಸ್ಥಿತರಿದ್ದರು.

*ಯಾಜ್ಞವಲ್ಕ್ಯ ಶಾಲೆ:


ತಾಲೂಕಿನ ಯಾಜ್ಞವಲ್ಕ್ಯ ಸಿಬಿಎಸ್‌ಸಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶಾಲೆಯಲ್ಲಿ ಪ್ರತಿ ಮಗುವಿಗೂ ಒಂದು ಗಿಡವನ್ನು ಕೊಡಲಾಯಿತು.1000ಕ್ಕೂ ಹೆಚ್ಚು ಸಸಿಗಳನ್ನು ಶಾಲೆಯ ಸಂಸ್ಥಾಪಕರಾದ ಟಿ ಸುರೇಶ್ ಅವರು ಮಕ್ಕಳಿಗೆ ವಿತರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪರಿಸರವಾದಿ ಪಿಜೆ ತಿಪ್ಪೇಸ್ವಾಮಿ ಸೇರಿದಂತೆ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಆಡಳಿತ ಅಧಿಕಾರಿ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

*ಮೋಕ್ಷಗುಂಡಂ ಶಾಲೆ:

ಪರಿಸರ ದಿನಾಚರಣೆ ಅಂಗವಾಗಿ ಹಿರಿಯೂರು ನಗರದ ಪ್ರತಿಷ್ಠಿತ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ವಿದ್ಯಾ ಮಂದಿರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಹತ್ವ ಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಅಧ್ಯಕ್ಷ ಎಂ ಬಸವರಾಜಪ್ಪ ಮಾತನಾಡಿ, ಪ್ರಕೃತಿಯು ಪ್ರಪಂಚದ ಮೇಲೆ ವಾಸಿಸುವ ಎಲ್ಲರಿಗೂ ಆಮ್ಲಜನಕ ಒದಗಿಸುತ್ತಿದೆ. ಮನುಷ್ಯ ತನ್ನ ಭೋಗಗಳ ಸೃಷ್ಟಿಗೆ ಮರಗಳನ್ನು ಕಡಿದು ಕಾಡುಗಳನ್ನು ನಾಶಪಡಿಸುತ್ತಿದ್ದಾನೆ.ಪ್ಲಾಸ್ಟಿಕ್ ಬಳಕೆ ಮುಖಾಂತರ ಪರಿಸರವನ್ನು ಮತ್ತಷ್ಟು ಮಲಿನಗೊಳಿಸಿದ್ದಾನೆ. ಇದರಿಂದ ಪರಿಸರ ಮಲಿನವಾಗುತ್ತಿದೆ ಎಂದರು. ಶಾಲೆಯ ಮಕ್ಕಳು ಪರಿಸರವನ್ನು ಉಳಿಸಿ ಪರಿಸರವನ್ನು ಬೆಳೆಸಿ ಎಂಬ ಶೀರ್ಷಿಕೆ ಅಡಿಯಲ್ಲಿ ಹಾಕಿಕೊಂಡಿದ್ದ ವೇಷಭೂಷಣಗಳು ಮತ್ತು ಫಲಕಗಳು ಎಲ್ಲರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ದೇವರಾಜ್, ಕಾರ್ಯದರ್ಶಿ ಎಚ್.ಎಂ.ಬಸವರಾಜ್, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರಾದ ಕೆ.ಆರ್.ವೀರಭದ್ರಯ್ಯ, ಹರ್ಷ ಧರೆಧಾರ್, ರವಿಪ್ರಸಾದ್, ಮುಖ್ಯ ಶಿಕ್ಷಕ ಜಿ ತಿಪ್ಪೇಸ್ವಾಮಿ ಸೇರಿದಂತೆ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

*ವಿದ್ಯೋದಯ ಎಜುಕೇಷನ್ ಟ್ರಸ್ಟ್ :

ನಗರದ ಹೌಸಿಂಗ್ ಬೋರ್ಡ್‌ನಲ್ಲಿ ವಿದ್ಯೋದಯ ಎಜುಕೇಷನ್ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ವೀಣಾ ಕೃಷ್ಣಮೂರ್ತಿ,ಡಿ ಆರ್ ಎಫ್ ಓ ವಸಂತಕುಮಾರ್,ಸಹ ಪ್ರಾಧ್ಯಾಪಕ ಕೃಷ್ಣಮೂರ್ತಿ ಪಿ,ಆರ್ ದಯಾನಂದಪ್ಪ, ರುದ್ರಪ್ಪ, ರಂಗಸ್ವಾಮಿ, ಕಾಂತೇಗೌಡರು,ಮಂಜುನಾಥ್ ಮುಂತಾದವರು ಹಾಜರಿದ್ದರು.