ಬೆಂಗಳೂರು : ಚಲಿಸುವ ರೈಲಿಗೆ ಸಿಲುಕಿ ಆತ್ಮ*ತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಎಕ್ಸ್‌ಪ್ರೆಸ್ ರೈಲನ್ನು ತುರ್ತು ನಿಲುಗಡೆ ಮಾಡಿಸಿ ಬುಧವಾರ ರಾತ್ರಿ ಹೆಬ್ಬಗೋಡಿ ಠಾಣೆ ಹೊಯ್ಸಳ ಪೊಲೀಸರು ರಕ್ಷಿಸಿದ್ದಾರೆ. ಕೇರಳ ಮೂಲದ ಅರ್ಜುನ್ (30) ಜೀವ ಉಳಿದಿದ್ದು, ಚಿಂತಲ ಮಡಿವಾಳ ಸಮೀಪ ರೈಲಿಗೆ ಸಿಲುಕಿ ಆತ್ಮ*ತ್ಯೆಗೆ ರಾತ್ರಿ ಆತ ಮುಂದಾಗಿದ್ದ. ಈ ವೇಳೆ ತನ್ನನ್ನು ಕಾಪಾಡಲು ಬಂದ ಪೊಲೀಸರಿಂದ ತಪ್ಪಿಸಿಕೊಂಡು ರೈಲಿಗೆ ಸಿಲುಕಲು ಅರ್ಜುನ್‌ ಮುಂದಾಗಿದ್ದಾನೆ. ಕೊನೆಗೆ ರೈಲನ್ನೇ ನಿಲುಗಡೆ ಮಾಡಿಸಿ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ

ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ರಾತ್ರಿ ಚಲಿಸುವ ರೈಲಿಗೆ ತಲೆಕೊಟ್ಟು ಪ್ರಾಣ ತ್ಯಾಗಕ್ಕೆ ಅರ್ಜುನ್ ನಿರ್ಧರಿಸಿದ್ದ. ಅಂತೆಯೇ ಚಿಂತಲ ಮಡಿವಾಳ ಬಳಿ ರೈಲ್ವೆ ಹಳಿಗಳ ಮೇಲೆ ಮಲಗಿದ್ದ ಆತನನ್ನು ಸಾರ್ವಜನಿಕರೊಬ್ಬರು ನೋಡಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಬುಧವಾರ ರಾತ್ರಿ 11.17ಕ್ಕೆ ಆತ ಕರೆ ಮಾಡಿ ತಿಳಿಸಿದ್ದಾನೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರಿಗೆ ನಿಯಂತ್ರಣ ಕೊಠಡಿಯಿಂದ ತುರ್ತು ಸಂದೇಶ ರವಾನೆಯಾಗಿದೆ.

5 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣೆ ಹೊಯ್ಸಳ ವಾಹನದಲ್ಲಿ ಸಹಾಯಕ ಎಸ್‌ಐ ರವಿ ನಾಯಕ್ ಹಾಗೂ ಹೆಡ್ ಕಾನ್‌ಸ್ಟೇಬಲ್ ದೇವಂದ್ರಪ್ಪ ತೆರಳಿದ್ದಾರೆ. ಆದರೆ ಅಷ್ಟರಲ್ಲಿ ಅದೇ ಕುರ್ಲಾ ಎಕ್ಸ್‌ಪ್ರೆಸ್ ರೈಲು ಸನಿಹಕ್ಕೆ ಆಗಮಿಸುತ್ತಿತ್ತು. ಇತ್ತ ಪೊಲೀಸರನ್ನು ನೋಡಿದ ಕೂಡಲೇ ಅರ್ಜುನ್‌ ರೈಲು ಬರುವ ದಿಕ್ಕಿನ ಕಡೆಗೆ ಓಡಲು ಶುರು ಮಾಡಿದ್ದಾನೆ. ಈ ಅಪಾಯ ಅರಿತು ಸಮಯ ಪ್ರಜ್ಞೆ ಮೆರೆದ ಎಎಸ್‌ಐ ನಾಯಕ್, ತಕ್ಷಣವೇ ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕುರ್ಲಾ ಎಕ್ಸ್‌ಪ್ರೆಸ್ ತುರ್ತು ನಿಲುಗಡೆಗೆ ಮನವಿ ಮಾಡಿದ್ದಾರೆ. ಆಗ ರೈಲ್ವೆ ಮಾಸ್ಟರ್ ಅವರಿಂದ ಸಂದೇಶ ತಲುಪಿ ಹುಸ್ಕೂರು ರೈಲ್ವೆ ನಿಲ್ದಾಣದಲ್ಲಿ 45 ನಿಮಿಷ ರೈಲು ನಿಂತಿದೆ. ಈ ಮೂಲಕ ಅಮೂಲ್ಯ ಜೀವ ಉಳಿದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.


ರಕ್ಷಣಾ ಸಿಬ್ಬಂದಿಗೆ ಅಭಿನಂದನೆ:

ಆತ್ಮ*ತ್ಯೆ ಯತ್ನಿಸಿದವನ ಜೀವ ಉಳಿಸಿದ ಎಎಸ್ಐ ರವಿನಾಯಕ್ ಹಾಗೂ ದೇವೇಂದ್ರಪ್ಪ ಅವರನ್ನು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎ.ನಾರಾಯಣ್ ಅಭಿನಂದಿಸಿದರು.