ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಟಾರ್ಚ್‌ ಬ್ಯಾಟರಿಯಲ್ಲಿ ಅಳವಡಿಸಿದ್ದ ಸುಧಾರಿತ ಕಚ್ಚಾ ಬಾಂಬ್ (ಐಇಡಿ) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರನ್ನು ಜಂಟಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಟಾರ್ಚ್‌ ಬ್ಯಾಟರಿಯಲ್ಲಿ ಅಳವಡಿಸಿದ್ದ ಸುಧಾರಿತ ಕಚ್ಚಾ ಬಾಂಬ್ (ಐಇಡಿ) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರನ್ನು ಜಂಟಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ರಾಜ್ಯದ ಬುರಹ್ಹಾನ್‌ ಅಹ್ಮದ್ ಬರ್ಭುಯ್ಯ (20), ಜಾಹಿದ್‌ವುಲ್ ಹುಸೇನ್ (27), ಸಾಜಿದುಲ್ ಲಶ್ಕರ್ (22) ಬಂಧಿತರು. ಆರೋಪಿಗಳು ಹಳೇ ದ್ವೇಷದ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ತನಿಖೆ ವೇಳೆ ಬಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂವರು ಆರೋಪಿಗಳು ಹಾಗೂ ಹತ್ಯೆ ಮಾಡಲು ಗುರಿ ಮಾಡಲಾಗಿದ್ದ ಸೆಕ್ಯೂರಿಟಿ ಗಾರ್ಡ್ ಒಂದೇ ಗ್ರಾಮದವರು. ಪುಲಕೇಶಿ ನಗರದ ಜರ್ಮಯ್ಯ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಐಇಡಿ ಇರಿಸಿ ಸ್ಫೋಟ ಘಟನೆ ಸಂಬಂಧ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಐಇಡಿಯನ್ನು ಬುರ‌ಹ್ಹಾನ್‌ ಅಹ್ಮದ್ ಬುರ್ಭುಯ್ಯ ಸಿದ್ಧಪಡಿಸಿದ್ದ. ಇದಕ್ಕೆ ಬೇಕಾದ ವಸ್ತುಗಳ ಖರೀದಿಗೆ ಸಾಜಿದುಲ್ ಹಾಗೂ ಜಾಹಿದ್‌ವುಲ್ ಹಣಕಾಸು ನೆರವು ನೀಡಿದ್ದರು. ಮಸ್ಕಿಯಲ್ಲಿ ಬುರ‌ಹ್ಹಾನ್‌ ಅಹ್ಮದ್ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದನು. ಜಾಹಿದ್‌ವುಲ್ ಬೆಂಗಳೂರಿನ ಜಯನಗರದಲ್ಲಿ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮತ್ತು ಸಾಜಿದುಲ್ ಮಲ್ಲೇಶ್ವರದ ಕಾಫಿ ಕೆಫೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಕಳೆದ 8 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಸಮಯ ಸಿಕ್ಕಾಗ ಬುರ‌ಹ್ಹಾನ್‌ ಅಹ್ಮದ್ ಬೆಂಗಳೂರಿಗೆ ಬಂದು ಹೋಗುತ್ತಿದ್ದ.

ಬಸ್‌ನಲ್ಲಿ ಸ್ಪೋಟಕ ಸಾಗಾಟ:

ಬುರ‌ಹ್ಹಾನ್‌ ಅಹ್ಮದ್ ತಿಂಗಳಿಂದ ಹಂತ ಹಂತವಾಗಿ ಕಚ್ಚಾ ಬಾಂಬ್ ಮನೆಯಲ್ಲಿಯೇ ತಯಾರಿಸಿ ಅ.16ರಂದು ರಾಯಚೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ತಂದಿದ್ದ. ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಹತ್ಯೆ ಮಾಡಲು ಎರಡು ದಿನ ಮುಂಚೆಯೇ ಬೆಂಗಳೂರಿಗೆ ಆಗಮಿಸಿ ನಂತರ ಸಾಜಿದುಲ್ ಮನೆಯಲ್ಲಿ ಆಶ್ರಯ ಪಡೆದಿದ್ದ. ಅ.19ರಂದು ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟದ ಪಕ್ಕದ ಅಂಗಡಿಯಲ್ಲಿ ಪಾರ್ಸೆಲ್ ಇಟ್ಟಿದ್ದರು. ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರೊಬ್ಬರ ಮೊಬೈಲ್ ಪಡೆದು ಅಲ್ಲಾವುದ್ದೀನ್‌ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಬುರ‌ಹ್ಹಾನ್‌ ಅಹ್ಮದ್ ಮಾತನಾಡಿದ್ದ. ಆದರೆ ಸೆಕ್ಯೂರಿಟಿ ಗಾರ್ಡ್‌ಗೆ ಹಿಂದೆ ಮಾತನಾಡಲು ಬಾರದ ಹಿನ್ನೆಲೆಯಲ್ಲಿ ಪಾರ್ಸೆಲ್ ಅನ್ನು ಕಟ್ಟಡ ಮಾಲೀಕ ರೆಹಮಾನ್‌ಗೆ ನೀಡಿದ್ದಾನೆ. ಅವರು ಅದನ್ನು ಪರಿಶೀಲಿಸಿ ಇದು ನನ್ನದಲ್ಲ ಬೇರೆ ಯಾರದ್ದೋ ಇರಬೇಕು ಕೇಳಿ ನೋಡು ಎಂದು ಕಳುಹಿಸಿದ್ದರು. ಇದರಿಂದ ಅವರು ಅಪಾಯದಿಂದ ಪಾರಾಗಿದ್ದರು. ಆ ಪಾರ್ಸೆಲ್‌ನ್ನು ಸೆಕ್ಯೂರಿಟಿ ಗಾರ್ಡ್ ತನ್ನ ಬಳಿಯೇ ಒಂದು ದಿನ ಇಟ್ಟುಕೊಂಡಿದ್ದ.

ಪಾರ್ಸೆಲ್ ಓಪನ್ ಮಾಡಲು ಹೇಳಿದ್ದರು: ತಾವು ರೂಪಿಸಿದ್ದ ಸಂಚಿನಂತೆ ಐಇಡಿ ಸ್ಫೋಟಗೊಳ್ಳದ ಪರಿಣಾಮ ಅ.20ರಂದು ಮಧ್ಯಾಹ್ನ ವ್ಯಕ್ತಿಯೊಬ್ಬರ ಮೊಬೈಲ್‌ನಿಂದ ಸೆಕ್ಯೂರಿಟಿಗೆ ಮತ್ತೆ ಕರೆ ಮಾಡಿ ಪಾರ್ಸೆಲ್ ಓಪನ್ ಮಾಡುವಂತೆ ಹೇಳಿದ್ದಾರೆ. ಹಿಂದಿ ಭಾಷೆ ಅರ್ಥವಾಗದ ಕಾರಣ ಸೆಕ್ಯೂರಿಟಿ ಗಾರ್ಡ್ ಐದನೇ ಮಹಡಿಗೆ ಪಾರ್ಸೆಲ್ ಸಮೇತ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದ ಇತರೆ ಕಾರ್ಮಿಕರಿಗೆ ಕೇಳಿದ್ದ. ಯಾರೊಬ್ಬರು ತಮ್ಮದಲ್ಲ ಎಂದು ಹೇಳಿದ್ದರು. ಹಿಂದಿಯಲ್ಲಿ ಯಾರೋ ಮಾತನಾಡುತ್ತಿದ್ದಾರೆ ಎಂದು ಹೇಳಿ ಅಲ್ಲಿಯೇ ಇದ್ದ ಪೈಂಟರ್‌ ಸೂರಜ್ ಕುಮಾರ್‌ಗೆ ನೀಡಿದ್ದರು. ಆತ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಾ ಪಾರ್ಸೆಲ್ ತೆರೆಯುತ್ತಿದ್ದಂತೆ ಐಇಡಿ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಉತ್ತರ ಪ್ರದೇಶ ಸೂರಜ್ ಕುಮಾರ್, ಸೆಕ್ಯೂರಿಟಿ ಗಾರ್ಡ್ ಎಂ.ಅಲ್ಲಾವುದ್ದೀನ್ ಗಾಯಗೊಂಡಿದ್ದರು.

ತಂಗಿಯ ಮದುವೆ ನಿಲ್ಲಿಸಿದಕ್ಕೆ ಕೃತ್ಯ:

ಆರೋಪಿ ಜಾಹಿದ್‌ವುಲ್ ಮತ್ತು ಅಲ್ಲಾವುದ್ದೀನ್ ಇಬ್ಬರೂ ದಾಯಾದಿ ಸಂಬಂಧಿಕರಾಗಿದ್ದಾರೆ. ಜಮೀನು ಮತ್ತು ಹಣದ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿತ್ತು. ಜಾಹಿದ್‌ವುಲ್‌ ತಂಗಿಯ ಮದುವೆ ಯುವಕನೊಂದಿಗೆ ಜತೆ ನಿಶ್ಚಯವಾಗಿತ್ತು. ಆ ಮದುವೆಯನ್ನು ನಿಲ್ಲಿಸಿದ್ದ. ಇದರಿಂದ ವೈರತ್ವ ಉಂಟಾಗಿ ಅಲ್ಲಾವುದ್ದೀನ್ ಹತ್ಯೆ ಮಾಡುವ ಯೋಜನೆ ರೂಪಿಸಿದ್ದ. ತಾಂತ್ರಿಕವಾಗಿ ಪರಿಣತಿ ಹೊಂದಿದ ಅಹ್ಮದ್ ಜತೆ ಸೇರಿ ಐಇಡಿ ತಯಾರಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು. ಬಾಕ್ಸ್.. ಯೂಟ್ಯೂಬ್ ನೋಡಿ ಐಇಡಿ ತಯಾರಿಕೆ

ಆರೋಪಿ ಬುರ‌ಹ್ಹಾನ್‌ ಅಹ್ಮದ್ ಮಸ್ಕಿಯಲ್ಲಿ ಇಂಟರ್‌ನೆಟ್, ಯೂಟ್ಯೂಬ್ ನೋಡಿ ಐಇಡಿ ತಯಾರಿಸಿದ್ದ. ಅದಕ್ಕೆ ಬೇಕಾಗುವ ಹಣಕಾಸು, ವಸ್ತುಗಳ ನೆರವನ್ನು ಜಾಹಿದ್‌ವುಲ್ ಮತ್ತು ಸಾಜಿದುಲ್ ನೀಡಿದ್ದರು. ಪ್ರಾಯೋಗಿಕವಾಗಿ ತಾನು ಇದ್ದ ಮನೆಯಲ್ಲಿ ಅದನ್ನೂ ಸ್ಫೋಟಗೊಳಿಸಿ ಪರಿಶೀಲನೆ ನಡೆಸಿದ್ದ. ಅದು ಯಶಸ್ವಿಯಾದ ಬಳಿಕ ಬ್ಯಾಟರಿ ಬಾಕ್ಸ್‌ನಲ್ಲಿ ಮತ್ತೊಂದು ಐಇಡಿ ತಯಾರಿಸಿದ್ದ. ಸ್ಫೋಟ ಕೃತ್ಯದ ಬಗ್ಗೆ ಮೂವರು ವಾಟ್ಸ್‌ಪ್ ಗ್ರೂಪ್ ರಚನೆ ಮಾಡಿಕೊಂಡು ಸಂವಹನ ನಡೆಸುತ್ತಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು 1500 ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೂ 2 ದಿನ ಮುಂಚಿವಾಗಿ ನಿರ್ಮಾಣ ಹಂತದ ಕಟ್ಟದ ಬಳಿ ಓಡಾಡಿದ್ದ ಮೊಬೈಲ್ ಟವರ್ ಲೋಕೆಷನ್ ಆಧಾದ ಮೇಲೆ ಸ್ಫೋಟ ನಡೆದ 72ಗಂಟೆಯಲ್ಲಿ ಜಾಹಿದ್‌ವುಲ್ ಹುಸೇನ್ ಹಾಗೂ ಸಾಜಿದುಲ್ ಇಸ್ಲಾಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಮಸ್ಕಿಯಲ್ಲಿ ತಲೆಮರೆಸಿಕೊಂಡಿದ್ದ ಐಇಡಿ ತಯಾರಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್ ಸಂಭಾಷಣೆ ಹಾಗೂ ವಾಟ್ಸ್‌ಪ್ ಚಾಟ್‌ನಲ್ಲಿ ಆರೋಪಿಗಳು ಅಸ್ಸಾಮಿ ಭಾಷೆಯಲ್ಲಿ ಪರಸ್ಪರ ಮಾತನಾಡಿಕೊಂಡಿದ್ದರು.

ಕೋಟ್...

ಆರೋಪಿಗಳ ಬಂಧಕ್ಕೆ ಎನ್‌ಐಎ, ಎಟಿಸಿ, ಸಿಸಿಬಿ, ಐಎಸ್‌ಡಿ, ಹಾಗೂ ಅಸ್ಸಾಂ ಪೊಲೀಸರು ಹೆಚ್ಚು ಸಹಕಾರ ನೀಡಿದ್ದಾರೆ. 10 ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದೆ. ಈ ತಂಡಕ್ಕೆ ಇಲಾಖೆಯಿಂದ 3 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಆರೋಪಿಗಳು ಉಗ್ರರು, ಉಗ್ರ ಸಂಘಟನೆಗಳ ಸಂಪರ್ಕ ಹೊಂದಿಲ್ಲ. ಈ ಸಂಬಂಧ ಹೆಚ್ಚುವರಿ ತನಿಖೆ ನಡೆಯುತ್ತಿದೆ.-ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತರು