ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳಲ್ಲೇ ಅಂದಾಜು 631 ಕೋಟಿ ರು. ವೆಚ್ಚದಲ್ಲಿ ಬಿಡಿಎ ನಿರ್ಮಿಸಿರುವ ಎಸ್.ಎಂ. ಕೃಷ್ಣ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಮತ್ತು ಅನೇಕ ಕಡೆ ರಸ್ತೆ ತಗ್ಗು (ರೋಡ್ ಡಿಪ್ರೆಷನ್) ಸೃಷ್ಟಿಯಾಗಿದ್ದು, ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳಲ್ಲೇ ಅಂದಾಜು 631 ಕೋಟಿ ರು. ವೆಚ್ಚದಲ್ಲಿ ಬಿಡಿಎ ನಿರ್ಮಿಸಿರುವ ಎಸ್.ಎಂ. ಕೃಷ್ಣ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಮತ್ತು ಅನೇಕ ಕಡೆ ರಸ್ತೆ ತಗ್ಗು (ರೋಡ್ ಡಿಪ್ರೆಷನ್) ಸೃಷ್ಟಿಯಾಗಿದ್ದು, ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳು ಏಳುವಂತೆ ಮಾಡಿದೆ.

ಬಿಡಿಎ ನಿರ್ಮಿತ ಕೆಂಪೇಗೌಡ ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ, ಮಾಗಡಿ ರಸ್ತೆಯಲ್ಲಿ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ಡಿಪೋ ನಡುವೆ ನಿರ್ಮಿಸಿರುವ ಹತ್ತೂವರೆ ಕಿ.ಮೀ ಉದ್ದದ ಈ ರಸ್ತೆಯನ್ನು ಕೆಂಪೇಗೌಡ ಜನ್ಮದಿನಾಚರಣೆಯಾದ ಜೂ.27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದ್ದರು. ಆದರೆ, ರಸ್ತೆ ಉದ್ಘಾಟನೆಗೆ ಮೊದಲೇ ಮಾಗಡಿ ರಸ್ತೆ ಬಳಿ ಗುಂಡಿಗಳು ಸೃಷ್ಟಿಯಾಗಿದ್ದವು. ನಂತರ ರಸ್ತೆಯನ್ನು ರಿಪೇರಿ ಮಾಡಲಾಗಿತ್ತು.

ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಮತ್ತೆ ತಗ್ಗು ಹಾಗೂ ಗುಂಡಿಗಳು ಸೃಷ್ಟಿಯಾಗಿವೆ. ಸೂಲಿಕೆರೆ ಸಮೀಪದಲ್ಲಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಕಿತ್ತುಬಂದಿದ್ದು, ಒಳಗಿನ ಕಲ್ಲುಗಳೆಲ್ಲ ಮೇಲೆದ್ದು ರಸ್ತೆ ತುಂಬ ಹರಡಿಕೊಂಡಿವೆ. ಅಲ್ಲದೇ, ಕೊನೆ ಹಂತದಲ್ಲಿ ಕಾಮಗಾರಿ ಮಾಡಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಕೆಳಗಿನ ಸುರಂಗ ಪ್ರವೇಶದ ಬಳಿ ರಸ್ತೆಯು ತಗ್ಗು ದಿಣ್ಣೆಯಂತಾಗಿದೆ. ಡಾಂಬಾರು ಹಾಕುವ ಮುನ್ನ ಕೆಳಭಾಗದಲ್ಲಿ ಮಣ್ಣು ಮತ್ತು ವೆಟ್ ಮಿಕ್ಸ್ ಅನ್ನು ಸೂಕ್ತ ರೀತಿಯಲ್ಲಿ ಹಾಕಿ ಗಟ್ಟಿಗೊಳಿಸದಿರುವುದೇ ರಸ್ತೆಯಲ್ಲಿ ತಗ್ಗು ದಿಣ್ಣೆ ಸೃಷ್ಟಿಯಾಗಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಾಲತಾಣಗಳಲ್ಲಿ ಅಪ್‌ಲೋಡ್:

ಒಳ್ಳೆಯ ರಸ್ತೆ ಹಾಗೂ ವಾಹನ ಸಂಚಾರ ಕಡಿಮೆಯಿದೆ ಎಂದು ಜನರು ವೇಗವಾಗಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಆದರೆ, ಗುಂಡಿಗಳು ಮತ್ತು ತಗ್ಗು ಇರುವುದರಿಂದ ವಾಹನಗಳು ಸವಾರರ ನಿಯಂತ್ರಣ ತಪ್ಪುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ಈ ಕುರಿತಾದ ವಿಡಿಯೋವನ್ನು ಅಮಿತ್‌ಗೌಡ ಎಂಬುವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಯ ನೈಜ ಬಣ್ಣ ಬಯಲಾಗಿದೆ. ಕೂಡಲೇ ಸುರಂಗದಲ್ಲಿ ಸೋರುತ್ತಿರುವ ನೀರು ತಡೆಗಟ್ಟಬೇಕು. ತಗ್ಗು ಮತ್ತು ಗುಂಡಿ ಬಿದ್ದಿರುವ ಕಡೆ ಗುಣಮಟ್ಟದೊಂದಿಗೆ ರಸ್ತೆ ಪುನರ್‌ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುರಂಗದಲ್ಲಿ ನೀರು ಸೋರಿಕೆ:

ಮೈಸೂರು ರಸ್ತೆಯಲ್ಲಿ ಚಲ್ಲಘಟ್ಟ ಮೆಟ್ರೋ ಡಿಪೋ ಕೆಳಭಾಗದಲ್ಲಿ ರಸ್ತೆಯ ಸುರಂಗದಲ್ಲಿ ಅಲ್ಲಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ಹಲವು ಗುಂಡಿಗಳು ಸೃಷ್ಟಿಯಾಗಿವೆ. ಒಳಭಾಗದ ಬೃಹತ್ ಕಾಂಕ್ರಿಟ್ ಗೋಡೆಗಳ ಮೇಲೆ ನಿರಂತರವಾಗಿ ನೀರು ಜಿನುಗಿ ಪಾಚಿ ಕಟ್ಟಿಕೊಂಡಿದೆ. ತಕ್ಷಣ ಸಮಸ್ಯೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸಬಹುದು ಎನ್ನುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ನಿರ್ವಹಣೆ ಇಲ್ಲ:

ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಮರಳು, ಕಲ್ಲು, ಸಿಮೆಂಟ್ ಸಾಗಿಸುವ ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ. ಇದರಿಂದ ರಸ್ತೆಯ ಬದಿಯಲ್ಲಿ ನಿತ್ಯ ಕಸ ತುಂಬಿಕೊಳ್ಳುತ್ತಿದೆ. ಆದರೆ, ಅದನ್ನು ನಿಯಮಿತವಾಗಿ ಸ್ವಚ್ಛ ಮಾಡುವ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಕಸ ದಿನದಿಂದ ದಿನಕ್ಕೆ ಹೆಚ್ಚು ಸಂಗ್ರಹವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರ ಪಾಲಿಗೆ ಸಮಸ್ಯೆಯಾಗಿದೆ.

ವಿದ್ಯುತ್ ದೀಪಗಳ ನಿರ್ವಹಣೆ ಇಲ್ಲ:

ರಸ್ತೆಯಲ್ಲಿನ ಸುರಂಗ ಮಾರ್ಗ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ಲೈಟ್‌ಗಳನ್ನು ಅಳವಡಿಸಲಾಗಿದೆಯಾದರೂ ಅವುಗಳ ನಿರ್ವಹಣೆ ಇಲ್ಲ. ಅನೇಕ ಬಾರಿ ಸುರಂಗ ಸೇರಿದಂತೆ ಅನೇಕ ಸ್ಥಳಗಳಲ್ಲಿ ಲೈಟ್ ಆಫ್ ಮಾಡಲಾಗಿರುತ್ತದೆ. ಅದರಲ್ಲೂ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಸಮೀಪ ಮತ್ತು ರೋಟರಿಗಳ ಬಳಿ ಮಾತ್ರ ಲೈಟ್ ಹಾಕುತ್ತಾರೆ. ಉಳಿದೆಡೆ ಲೈಟ್‌ಗಳನ್ನು ನಿಯಮಿತವಾಗಿ ಹಾಕುವುದಿಲ್ಲ ಎಂದು ಜನರು ದೂರಿದ್ದಾರೆ.