ಜಿಲ್ಲೆಯಲ್ಲಿ ಕಳೆದ 2025ರ ಅ.1ರಿಂದ 2026ರ ಮೇ 27ರವರೆಗೆ ಪೊಲೀಸ್‌ ಠಾಣೆಗಳಲ್ಲಿ 294 ಕಳ್ಳತನ ಪ್ರಕರಣ ದಾಖಲಾಗಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ₹2.62 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಡಾ.ಹರ್ಷಾ ತಿಳಿಸಿದರು.

ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಸ್ವತ್ತಿನ್ನು ಮಾಲೀಕರಿಗೆ ನಗರದ ಎಸ್ಪಿ ಕಚೇರಿಯಲ್ಲಿ ವಿತರಿಸಿ ಶನಿವಾರ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ 2025ರ ಅ.1ರಿಂದ 2026ರ ಮೇ 27ರವರೆಗೆ ಪೊಲೀಸ್‌ ಠಾಣೆಗಳಲ್ಲಿ 294 ಕಳ್ಳತನ ಪ್ರಕರಣ ದಾಖಲಾಗಿದೆ. ಒಟ್ಟು ₹5,80,73,923 ಮೌಲ್ಯದ ಸ್ವತ್ತು ಕಳುವಾಗಿದೆ. ಪ್ರಕರಣಗಳನ್ನು ಬೇಧಿಸಲು ಎರಡು ತಿಂಗಳಿಂದ ವಿಶೇಷ ಕಾಳಜಿ ವಹಿಸಿ ತನಿಖೆಗಾಗಿ ತಂಡಗಳನ್ನು ರಚಿಸಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸಲಾಗಿದೆ. ಇದರ ಫಲವಾಗಿ ಈ ಪೈಕಿ 66 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಇದರಲ್ಲಿ ನಗದು ಹಣ, ಚಿನ್ನ, ಬೆಳ್ಳಿ, ಬೈಕ್‌, ಬ್ಯಾಟರಿ ಸೇರಿ ನಾನಾ ಸ್ವತ್ತಿನ ಒಟ್ಟು ₹2,62,45,351 ಮಾಲು ವಶಪಡಿಸಿಕೊಂಡು ಶೇ.45ರಷ್ಟು ಪ್ರಕರಣಗಳನ್ನು ಬೇಧಿಸಲಾಗಿದೆ. ಇದರಲ್ಲಿ ಚೀಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೆಲವರು ಹವ್ಯಾಸವಾಗಿಸಿಕೊಂಡು ನಾನಾ ಸ್ಕೀಂಗಳ ಮೂಲಕ ಜನತೆಗೆ ಕೋಟ್ಯಂತರ ರುಪಾಯಿ ವಂಚಿಸಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದೇ ಪ್ರಕರಣದಲ್ಲಿ ₹1.45ಕೋಟಿ ಸ್ವತ್ತು ವಶಕ್ಕೆ ಪಡೆದಿರುವುದು ವಿಶೇಷವಾಗಿದೆ.

ಈ ಸ್ವತ್ತಿನ ಕವಾಯತನ್ನು ನಡೆಸಿ ಫಿರ್ಯಾದಿದಾರರಿಗೆ, ವಾರಸುದಾರರಿಗೆ ವಿತರಿಸಲಾಗಿದೆ ಎಂದರು.

ಹಗಲು ಕಳ್ಳತನಕ್ಕೆ ಸಂಬಂಧಿಸಿದಂತೆ 13 ಪ್ರಕರಣ ದಾಖಲಾಗಿದ್ದು, 4 ಪ್ರಕರಣ ಪತ್ತೆಯಾಗಿದೆ. ₹28,54,600 ಸ್ವತ್ತು ಕಳುವಾಗಿದೆ. ಇದರಲ್ಲಿ ₹4,68,301 ವಶಪಡಿಸಿಕೊಂಡಿದೆ. ರಾತ್ರಿ ಕಳ್ಳತನಕ್ಕೆ ಸಂಬಂಧಿಸಿದಂತೆ 57 ಪ್ರಕರಣದಲ್ಲಿ 1,31,17,400 ಕಳುವಾಗಿದ್ದು, ಇದರಲ್ಲಿ7 ಪತ್ತೆಯಾಗಿದ್ದು ₹13,43,600. ಮನೆ ಕಳ್ಳತನ 16 ಪ್ರಕರಣ ದಾಖಲಾಗಿದ್ದು, 3 ಪ್ರಕರಣದಲ್ಲಿ ಪತ್ತೆ ಹಚ್ಚಲಾಗಿದೆ. ₹13,97,500 ವಶಪಡಿಸಿಕೊಂಡಿದೆ. ಸಾಮಾನ್ಯ ಕಳ್ಳತನ 189 ದಾಖಲಾಗಿದ್ದು, ₹3,31,39,523 ಕಳುವಾಗಿದೆ. 51 ಪ್ರಕರಣ ಪತ್ತೆ ಹಚ್ಚಿ ₹2,30,35,950 ವಶಪಡಿಸಿಕೊಂಡಿದೆ. ಇದನ್ನು ಹೊರತುಪಡಿಸಿ ಡಕಾಯಿತಿ ಸಂಬಂಧಿಸಿದಂತೆ 1 ಪ್ರಕರಣದಲ್ಲಿ ₹31500, ರಾಬರಿ 7 ಪ್ರಕರಣದಲ್ಲಿ ₹4,60,000, ಚೈನ್‌ ಸ್ನ್ಯಾಚಿಂಗ್‌ 4 ಪ್ರಕರಣದಲ್ಲಿ ₹16 ಲಕ್ಷ ಮೌಲ್ಯದ ಸ್ವತ್ತು ಕಳ್ಳತನವಾಗಿದೆ. ಜಾನುವಾರು ಕಳ್ಳತನ 7 ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪ್ರಕರಣಗಳ ತನಿಖೆ ಕೈಗೊಂಡಿದೆ ಎಂದು ತಿಳಿಸಿದರು.

ಎಎಸ್ಪಿ ನವೀನ್ ಕುಮಾರ್ ಹಾಗೂ ಡಿವೈಎಸ್ಪಿಗಳು, ಸಿಪಿಐ ಹಾಗೂ ಪಿಎಸ್‌ಐಗಳು ಇದ್ದರು.

ಜೂನ್‌ 1ರಿಂದ ಹೆಲ್ಮೆಟ್‌ ಕಡ್ಡಾಯ ಖಚಿತ:

ಬಳ್ಳಾರಿ ನಗರ ಸೇರಿ ಜಿಲ್ಲೆಯಲ್ಲಿ ಜೂನ್‌ 1ರಿಂದ ಜಿಲ್ಲಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕು. ಹೆಲ್ಮೆಟ್‌ ಬಳಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಅಪಘಾತ ಪ್ರಕರಣಗಳ ಪೈಕಿ ಹೆಲ್ಮೆಟ್‌ ಇಲ್ಲದವರು ಹೆಚ್ಚಿನ ಸಂಖ್ಯೆಯಲ್ಲಿಮೃತಪಟ್ಟಿದ್ದು, ಹೀಗಾಗಿ ಜಿಲ್ಲೆಯಲ್ಲಿಕಟ್ಟುನಿಟ್ಟಾಗಿ ಹೆಲ್ಮೆಟ್‌ ಬಳಕೆ ಕಡ್ಡಾಯಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಸ್ಪಿ ಸುಮನ್‌ ಡಿ.ಪನ್ನೇಕರ್‌ ತಿಳಿಸಿದರು.