ಮಳೆನೀರು ಸಂರಕ್ಷಿಸಿ ಅಂತರ್ಜಲ ಹೆಚ್ಚಿಸಿ: ರುದ್ರಪ್ಪ ಲಮಾಣಿ

KannadaprabhaNewsNetwork | Published : Mar 14, 2025 12:35 AM

ಸಾರಾಂಶ

ಮಣ್ಣು, ನೀರು ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕು ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು.

ಹಾವೇರಿ: ಅಂತರ್ಜಲ ಹೆಚ್ಚಿಸಲು, ಮಳೆನೀರು ಸಂರಕ್ಷಣೆ, ಜಮೀನುಗಳಲ್ಲಿ ಬದು ನಿರ್ಮಾಣ ಹಾಗೂ ಕೃಷಿ ಹೊಂಡಗಳ ನಿರ್ಮಾಣಕ್ಕಾಗಿ ಇರುವ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.ತಾಲೂಕಿನ ನೆಗಳೂರ ಗ್ರಾಮದ ಪ್ರಾಥಮಿಕ ಸಹಕಾರ ಸಂಘದ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಜಲಾನಯನ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉಪ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಮಾತನಾಡಿ, ಮಣ್ಣು, ನೀರು ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕು ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಬೇಕು. ಒಂದು ಬೆಳೆಗೆ ಸಿಮೀತವಾಗದೆ ಸಮಗ್ರ ಕೃಷಿ ಚಟುವಟಿಕೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಶ್ಮಿ ಅವರು ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತು ಉಪನ್ಯಾಸ ನೀಡಿದರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ ಯೋಜನೆಯಡಿ ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನೆಗಳೂರು ಮತ್ತು ಮರೋಳ ಗ್ರಾಮಗಳಲ್ಲಿ ಸೃಷ್ಟಿ ಚಿತ್ರ ಬೀದಿನಾಟಕ, ಕುಂಭಮೇಳ ಹಾಗೂ ವೀರಗಾಸೆ ಸಮೇತ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.ಶಾಲಾ ಮಕ್ಕಳಿಗೆ ಮಳೆ ನೀರು ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಕರೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹೀರಮಠ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಎಂ.ಎಂ. ಮೈದೂರ, ಕೆಎಂಎಫ್‌ ನಿರ್ದೇಶಕ ಬಸವೇಶಗೌಡ ಪಾಟೀಲ ಇತರರು ಇದ್ದರು.ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಸ್ವಾಗತಿಸಿದರು. ಕೃಷಿ ಅಧಿಕಾರಿ ಸಂತೋಷ ಬಡ್ಡಿಯವರ ನಿರೂಪಿಸಿ, ವಂದಿಸಿದರು.ಸತ್ಯಬೋಧ ಸ್ವಾಮಿಗಳ ಆರಾಧನಾ ಮಹೋತ್ಸವ

ಸವಣೂರು: ಪಟ್ಟಣದಲ್ಲಿರುವ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಗುರುಗಳ 242ನೇ ಆರಾಧನಾ ಮಹೋತ್ಸವ ಮಾ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಜರುಗಲಿದೆ.

ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಉದಯರಾಗ, ಅಷ್ಟೋತ್ತರ, ವಿದ್ವಾಂಸರಿಂದ ಉಪನ್ಯಾಸ ಗೋಷ್ಠಿ, ರಜತ ರಥೋತ್ಸವ, ಪಂಚಾಮೃತ, ಅಲಂಕಾರ, ಹಸ್ತೋದಕ ಸೇರಿದಂತೆ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲಾಗುತ್ತದೆ. ಸಂಜೆ ವಿದ್ವಾಂಸರಿಂದ ಉಪನ್ಯಾಸ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಸಂಗೀತ ಕಾರ್ಯಕ್ರಮ, ಭಜನೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಾನದಲ್ಲಿ ಜರುಗಲಿರುವ ಆರಾಧನಾ ಮಹೋತ್ಸವದಲ್ಲಿ ಎಲ್ಲ ಭಕ್ತವೃಂದ ಪಾಲ್ಗೊಳ್ಳುವಂತೆ ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಅನಂತಾಚಾರ್ಯ ಕೋರಿದ್ದಾರೆ.

Share this article