ಶಿವಮೊಗ್ಗ: ಜಿಲ್ಲೆಯಲ್ಲಿ ಎಲ್ಲೇ ಬಾಲ್ಯ ವಿವಾಹ ಪ್ರಕರಣ ನಡೆದರೂ ಅದನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮುದಾಯವನ್ನೊಳಗೊಂಡ ಪರಿಣಾಮಕಾರಿ ಕ್ರಮ ಕೈಗೊಂಡು ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಒಂದು ಬಾಲ್ಯ ವಿವಾಹ ಪ್ರಕರಣವನ್ನು ಹಾಟ್‌ಸ್ಪಾಟ್ ಎಂದು ಪರಿಗಣನೆಗೆ ತೆಗೆದುಕೊಂಡು ಚಟುವಟಿಕೆ ಕೈಗೊಳ್ಳಬೇಕು. ಶಾಶ್ವತ ಪರಿಹಾರ ಒದಗುವಂತಹ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮುಖಂಡರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಸಹಾಯ ತೆಗೆದುಕೊಂಡು ಸಮುದಾಯದಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವಂತಾಗಬೇಕು ಎಂದು ತಿಳಿಸಿದರು.
ಬಾಲ್ಯ ವಿವಾಹ ತಡೆಯುವಲ್ಲಿ ಶ್ರಮಿಸಿದ ಮುಖಂಡರು, ಪ್ರೇರಕರನ್ನು ಗೌರವಿಸಬೇಕು. ಸ್ಥಳೀಯವಾಗಿ ಕಾರ್ಯವೆಸಗುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸದ್ಬಳಕೆ ಮಾಡಿಕೊಂಡು ಅವರನ್ನೂ ಗೌರವಿಸಬೇಕು. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಬಾಲ್ಯ ವಿವಾಹ ತಡೆ ಕಾರ್ಯದೊಂದಿಗೆ ಸಮುದಾಯಗಳಲ್ಲಿ ಶಾಶ್ವತವಾಗಿ ಬಾಲ್ಯ ವಿವಾಹ ತಡೆಯುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಪ್ರಾಥಮಿಕ ಹಂತದ ಶಾಲೆಗಳಿಂದ ಹಿಡಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿ ದಿನ ಪೋಕ್ಸೋ ಮತ್ತು ಬಾಲ್ಯ ವಿವಾಹ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧನೆ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಕಾರ್ಯಾಗಾರ ಸೇರಿದಂತೆ ಉತ್ತಮ ಫಲಿತಾಂಶ ಬರುವಂತಹ, ಶಾಶ್ವತ ಪರಿಹಾರ ಒದಗುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾಡಳಿತದಿಂದ ಸಹ ಬಾಲ್ಯ ವಿವಾಹ ತಡೆಗೆ ಸಹಕರಿಸಿದ ಪ್ರೇರಕರು, ಮುಖಂಡರನ್ನು ಗೌರವಿಸಲಾಗುವುದು ಎಂದರು.ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇತ್ತೀಚಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ಅಂಗನವಾಡಿಯೊಂದರಲ್ಲಿ ಆರೋಗ್ಯ ತಪಾಸಣೆ ಆಗದಿರುವುದು ಕಂಡು ಬಂದಿದೆ. ಸಂಬಂಧಿಸಿದ ಪಿಎಚ್‌ಸಿ ವೈದ್ಯರು ಮತ್ತು ಸಿಡಿಪಿಒಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಗೆ ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡ್ ಸರಬರಾಜಿನಲ್ಲಿ ಕೊರತೆಯಿದ್ದು, ಶೀಘ್ರವಾಗಿ ಪೂರೈಸಬೇಕು. ಹಾಗೂ ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ ಔಷಧಿ ಮತ್ತು ಮಾತ್ರೆಗಳನ್ನು ಬೇಡಿಕೆಯನ್ವಯ ಆರೋಗ್ಯ ಇಲಾಖೆಯಿಂದ ಸರಬರಾಜು ಮಾಡಲು ಕ್ರಮ ವಹಿಸುವಂತೆ ಡಿಎಚ್‌ಒ ರವರಿಗೆ ಸೂಚನೆ ನೀಡಿದರು.ಜಿಲ್ಲೆಯ ಸ್ತ್ರೀಶಕ್ತಿ ಭವನಗಳ ದುರಸ್ತಿ, ಮಳಿಗೆಗಳ ಮರು ಹಂಚಿಕೆ, ಒಕ್ಕೂಟಗಳ ಪುನರ್ ರಚನೆ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತಾ, ಡಿಎಚ್‌ಒ ಡಾ.ನಟರಾಜ್, ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ತಾಜುದ್ದೀನ್ ಖಾನ್, ತಾಲೂಕುಗಳ ಸಿಡಿಪಿಒ, ಇತರೆ ಅಧಿಕಾರಿಗಳು ಹಾಜರಿದ್ದರು.ಲೈಂಗಿಕ ಕಾರ್ಯಕರ್ತರ ಪುನರ್ವಸತಿಗಾಗಿ ಪ್ರೋತ್ಸಾಹ ಧನಶಿವಮೊಗ್ಗ: ಲೈಂಗಿಕ ಕಾರ್ಯಕರ್ತರು, ಲೈಂಗಿಕ ಶೋಷಣೆಗೊಳಗಾದವರ ಪುನರ್ವಸತಿಗಾಗಿ ಚೇತನ ಯೋಜನೆಯಡಿ ಪ್ರತಿ ಫಲಾನುಭವಿಗೆ ನೇರವಾಗಿ 30,000 ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಈವರಗೆ 3 ಲಕ್ಷ ರು. ಬಿಡುಗಡೆಯಾಗಿದೆ. ಸಾಮಾನ್ಯ ವರ್ಗದವರಿಗೆ 1,50,000, ಎಸ್ಸಿಗೆ 90 ಸಾವಿರ, ಎಸ್‌ಟಿ 60 ಸಾವಿರ ರು. ಪ್ರೋತ್ಸಾಹ ಧನ ನೀಡಲಾಗಿದೆ. 2024-25 ನೇ ಸಾಲಿನ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 87 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸಂರಕ್ಷಣಾಧಿಕಾರಿಗಳ ಬಳಿ 40 ಹಾಗೂ ನ್ಯಾಯಾಲಯದಲ್ಲಿ 47 ಪ್ರಕರಣಗಳು ಬಾಕಿ ಇವೆ ಎಂದರು.26 ಬಾಲ್ಯ ವಿವಾಹ ತೆಡೆ: ಮಕ್ಕಳ ರಕ್ಷಣಾಧಿಕಾರಿಶಿವಮೊಗ್ಗ: ಜಿಲ್ಲೆಯಲ್ಲಿ 2024 ರಂದು ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಬಾಲ್ಯ ವಿವಾಹದ ಬಗ್ಗೆ ಒಟ್ಟು 89 ದೂರುಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 26 ಬಾಲ್ಯ ವಿವಾಹ ತಡೆಯಲಾಗಿದೆ. 63 ಬಾಲ್ಯ ವಿವಾಹ ನಡೆದಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.
ಬಾಲ್ಯ ವಿವಾಹ ತಡೆಯಲು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ, ವಿಶೇಷ ಗ್ರಾಮ ಸಭೆಗಳಲ್ಲಿ ಜಾಗೃತಿ, ಗೋಡೆ ಬರಹ, ರಕ್ಷಷಣೆ ನೀಡಿದ ಮಕ್ಕಳಿಗೆ ಕೌಶಲ್ಯ ತರಬೇತಿ, ರಕ್ಷಣಾ ಕ್ರಮಗಳು ಮತ್ತು ಸಹಕಾರ ಸಂಘಗಳಿಂದ ಪೋಷಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.