ಬಿಜೆಪಿಯಿಂದ ಜನರ ಭಾವನೆ ಕೆದಕುವ ಷಡ್ಯಂತ್ರ: ಸೊರಕೆ

KannadaprabhaNewsNetwork | Published : Jan 16, 2024 1:45 AM

ಸಾರಾಂಶ

ಭೂಮಸೂದೆಯಿಂದ ಹಿಡಿದು ಗ್ಯಾರಂಟಿ ಯೋಜನೆಯವರೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ತಲುಪಿಸುವ ಕೆಲಸ ಆಗಬೇಕು. ಈ ಹಿನ್ನಲೆಯಲ್ಲಿ ಜ. ೨೧ರಂದು ಮಂಗಳೂರಿನಲ್ಲಿ ರಾಜ್ಯ ರಾಷ್ಟ್ರ ನಾಯಕರ ಭಾಗವಹಿಸುವ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸಭೆಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಚುನಾವಣೆಯಲ್ಲಿ ಮತ ಗಳಿಸುವುದಕ್ಕಾಗಿ ಬಿಜೆಪಿ ದೇವರ ಹೆಸರು ಬಳಸುವ ಮೂಲಕ ಜನರ ಭಾವನೆಯನ್ನು ಕೆದಕುವ ಷಡ್ಯಂತ್ರ ರೂಪಿಸುತ್ತಿದೆ. ಅದಕ್ಕೆ ನೈಜ ಉದಾಹರಣೆ ಕಾರ್ಕಳ ತಾಲೂಕಿನ ಪರಶುರಾಮ್ ಥೀಮ್ ಪಾರ್ಕ್ ಹಾಗೂ ಅಯೋಧ್ಯಾ ರಾಮ ಮಂದಿರದ ಉದ್ಘಾಟನಾ ಸಮಾರಂಭ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಯ ಅಧಿಕಾರದ ಅವಧಿಯಲ್ಲಿ ನಡೆದ ಪರಶುರಾಮ್ ಥೀಮ್ ಪಾರ್ಕ್ ಪ್ರಕರಣ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಪ್ರಕರಣ ಹಾಗೂ ಸುಜ್ಲಾನ್ ಭೂಮಾಫಿಯಾ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಗಣಿಸಿದ್ದು ಪ್ರಸ್ತುತ ತನಿಖೆಯ ಹಂತದಲ್ಲಿದೆ ಎಂದರು.

ಪ್ರಣಾಳಿಕೆಯ ಭರವಸೆಯಂತೆ ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಭೂಮಸೂದೆಯಿಂದ ಹಿಡಿದು ಗ್ಯಾರಂಟಿ ಯೋಜನೆಯವರೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ತಲುಪಿಸುವ ಕೆಲಸ ಆಗಬೇಕು. ಈ ಹಿನ್ನಲೆಯಲ್ಲಿ ಜ. ೨೧ರಂದು ಮಂಗಳೂರಿನಲ್ಲಿ ರಾಜ್ಯ ರಾಷ್ಟ್ರ ನಾಯಕರ ಭಾಗವಹಿಸುವ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೊರಕೆ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಡಾ| ಅಂಶುಮಂತ್, ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಸಾದ್ ರಾಜ್ ಕಾಂಚನ್ ಮಾತನಾಡಿದರು.

ಇತ್ತೀಚಿಗೆ ನಿಧನರಾದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಸಿದ ಇಗ್ನೇಶಿಯಸ್ ಡಿ’ಸೋಜ, ಚಂದ್ರಶೇಖರ್ ಪಡುಬಿದ್ರಿ, ಶಬ್ಬಿರ್ ಸಾಹೇಬ್ ˌಹಾಗೂ ಬನ್ನಂಜೆ ಗಣೇಶ್ ಶೆಟ್ಟಿ ಅವರಿಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎ. ಗಪೂರ್ ನುಡಿನಮನ ಸಲ್ಲಿಸಿದರು.

ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳವಳ್ಳಿ, ವೆರೋನಿಕಾ ಕರ್ನೇಲಿಯೋ, ದಿನೇಶ್ ಪುತ್ರನ್, ಗೀತಾ ವಾಗ್ಳೆ, ರಮೇಶ್ ಕಾಂಚನ್, ರೋಶನಿ ಒಲಿವರಾ, ಮಮತಾ ಶೆಟ್ಟಿ, ಕೀರ್ತಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಮಹಾಬಲ ಕುಂದರ್, ಇಸ್ರಾಯಿಲ್ ಆತ್ರಾಡಿ, ಡಾ|ಸುನಿತಾ ಶೆಟ್ಟಿ ಮುಂತಾದವರಿದ್ದರು.

ಉಪಾಧ್ಯಕ್ಷ ನೀರೇಕೃಷ್ಣ ಶೆಟ್ಟಿ ಸ್ವಾಗತಿಸಿ, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ, ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.

Share this article