ಸಮಾಜದಲ್ಲಿ ಸಮಾನತೆ ಸಾಧಿಸಿದಲ್ಲಿ ಮಾತ್ರ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯ: ಜಿ.ಡಿ.ಹರೀಶ್‌ ಗೌಡ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಅಸ್ಪೃಶ್ಯತೆ ಈ ಸಮಾಜಕ್ಕೆ ಅಂಟಿರುವ ರೋಗವಾಗಿದೆ. ಎಲ್ಲರಿಗೂ ಸಮಾನ ಬದುಕು, ಹಕ್ಕುಗಳನ್ನು ಪ್ರತಿಪಾದಿಸುವ ಮಹತ್ತರ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅದರ ಪರಿಪಾಲನೆ ನಾವೆಲ್ಲರೂ ಮಾಡುತ್ತಿದ್ದೇವೆ. ಇಷ್ಟಾಗಿಯೂ ನಮ್ಮಲ್ಲಿ ಪರಿಪೂರ್ಣ ಸಮಾನತೆ ಸಾಧಿಸಲು ಆಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು

ಸಮಾಜದಲ್ಲಿ ಸಮಾನತೆ ಸಾಧಿಸಿದಲ್ಲಿ ಮಾತ್ರ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯವೆಂದು ಶಾಸಕ ಜಿ.ಡಿ. ಹರೀಶ್‌ ಗೌಡ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಜ್ಞಾನಜ್ಯೋತಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಸ್ಪೃಶ್ಯತಾ ನಿವಾರಣಾ ಸಪ್ತಾಹ 2024-25 ತಾಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸ್ಪೃಶ್ಯತೆ ಈ ಸಮಾಜಕ್ಕೆ ಅಂಟಿರುವ ರೋಗವಾಗಿದೆ. ಎಲ್ಲರಿಗೂ ಸಮಾನ ಬದುಕು, ಹಕ್ಕುಗಳನ್ನು ಪ್ರತಿಪಾದಿಸುವ ಮಹತ್ತರ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅದರ ಪರಿಪಾಲನೆ ನಾವೆಲ್ಲರೂ ಮಾಡುತ್ತಿದ್ದೇವೆ. ಇಷ್ಟಾಗಿಯೂ ನಮ್ಮಲ್ಲಿ ಪರಿಪೂರ್ಣ ಸಮಾನತೆ ಸಾಧಿಸಲು ಆಗುತ್ತಿಲ್ಲ. ಇದಕ್ಕಾಗಿ ಕಾನೂನು ಕಟ್ಟಳೆಗಳು ಸಾಕಷ್ಟಿದ್ದರೂ ಪ್ರತಿವ್ಯಕ್ತಿಯ ಮನಸು ಪರಿವರ್ತನೆಯಾಗದ ಹೊರತು ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದು ಸಂವಿಧಾನದ ಮೂಲ ಆಶಯವಾಗಿರುವಾಗ ಸಮಾನತೆ ಸಾಧಿಸದೇ ಸಂವಿಧಾನಕ್ಕೆ ಗೌರವ ಸಿಗಲು ಸಾಧ್ಯವಿಲ್ಲ. ಹಾಗಾಗಿ ಮನಸುಗಳು ಮಾಗಬೇಕಿದೆ. ನಾವು ಮನಸು ಮಾಡಬೇಕಿದೆ ಎಂದರು.

ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿದರು.

ಸಭೆಯಲ್ಲಿ ವಕೀಲೆ ಪವಿತ್ರಾ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ಕಾಯ್ದೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ನಗರಸಭಾಧ್ಯಕ್ಷ ಎಸ್. ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಮುಖಂಡರಾದ ನಾಗರಾಜ ಮಲ್ಲಾಡಿ, ಡಿ. ಕುಮಾರ್, ಮೋದೂರು ಮಹೇಶಾರಾಧ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಮಟ್ಟದ ಪ. ಜಾತಿ, ಪಂಗಡಗಳ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸದಸ್ಯ ಮಹದೇವ್, ಕೆಂಪರಾಜು, ರಾಮಕೃಷ್ಣ, ಪುಟ್ಟರಾಜು, ಗ್ಯಾರಂಟಿ ಯೋಜನೆ ತಾಲೂಕು ಉಸ್ತುವಾರಿ ರಾಘು, ತಹಸೀಲ್ದಾರ್ ಜೆ, ಮಂಜುನಾಥ್, ಇಒ ಕೆ. ಹೊಂಗಯ್ಯ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಅಶೋಕ್‌ ಕುಮಾರ್ ಇದ್ದರು.

Share this article