ಕನ್ನಡಪ್ರಭ ವಾರ್ತೆ ಮಡಿಕೇರಿ ದೇಶದ ಒಕ್ಕೂಟ ವ್ಯವಸ್ಥೆಗೆ, ಬಲವರ್ಧನೆಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯವರ್ಧನೆಗೆ ಶ್ರೇಷ್ಠ ಸಂವಿಧಾನ ಸೂಕ್ತ ಅಡಿಪಾಯ ಹಾಕಿಕೊಟ್ಟಿದೆ ಎಂದು ಮಡಿಕೇರಿಯ ಆರ್.ಆರ್.ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನ ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ ಸೀಮಿತವಾಗಿಲ್ಲ, ಅದನ್ನು ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ. ಆ ಮೂಲಕ ಅವರನ್ನು ಸದಾ ಸ್ಮರಣೆ ಮಾಡುವಂತಾಗಬೇಕು ಎಂದು ತಿಳಿಸಿದರು.ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಸಮಾಜ ಯಾವಾಗಲು ನೆನಪಿನಲ್ಲಿಟ್ಟುಕೊಳ್ಳುತ್ತದೆ. ದೇಶ ರಕ್ಷಣೆ ವಿಚಾರ ಬಂದಾಗ ವಿದ್ಯಾರ್ಥಿಗಳು ಸದಾ ಮುಂದಿರಬೇಕು. ಭಾರತದ ಪರಂಪರೆ ಉಳಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಮತ್ತು ಸಮಾಜಮುಖಿಯಾಗಿ ಬದುಕಬೇಕು. ಪ್ರಕೃತಿ ಉಳಿಸಿ ಬೆಳೆಸಬೇಕು, ನೀರಿನ ಮಹತ್ವ ಅರಿತು ಬದುಕುವುದು ನಮ್ಮ ಕರ್ತವ್ಯವಾಗಿದೆ ಎಂದು ಡಾ.ನವೀನ್ ಕುಮಾರ್ ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಶಿಕ್ಷಣದ ಪ್ರಗತಿ ಭಾರತ ರತ್ನ ಡಾ.ಬಿ.ಆರ್.ಅಬೇಂಡ್ಕರ್ ಕನಸಿನ ರೂಪವಾಗಿದೆ. ಬಡತನದಲ್ಲಿದ್ದರೂ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದ್ದಾರೆ ಎಂದರು.ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ರಚನೆ ಮಾಡಲಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂಬ ನಿಟ್ಟಿನಲ್ಲಿ ಸಂಘಟನೆಯ ಮೂಲಕ ಕಳೆದ 10 ವರ್ಷಗಳಿಂದ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿ ಹೆಚ್ಚಿನ ಫಲಿತಾಂಶಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ, ದಲಿತ ಸಂಘರ್ಷ ಸಮಿತಿ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ. ಸಂಘಟನೆಯ ಸಾಮಾಜಿಕ ಚಿಂತನೆ ಮತ್ತು ಶಿಕ್ಷಣದ ಬಗ್ಗೆ ಅದಕ್ಕಿರುವ ಕಾಳಜಿ ಶ್ಲಾಘನೀಯ ಎಂದರು. ಸನ್ಮಾನ: ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿನಿಯರು, ಹೆಚ್ಚು ಅಂಕ ಗಳಿಸಲು ಕಾರಣಕರ್ತರಾದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.ವಿದ್ಯಾರ್ಥಿನಿಯರಾದ ಮೌಲ್ಯ ಹಾಗೂ ರಾಜೇಶ್ವರಿ ಪ್ರಾರ್ಥಿಸಿದರು. ಸಂಘಟನೆಯ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಪ್ರೇಮ ಕೃಷ್ಣಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಕನ್ನಿಕಾ ನಿರೂಪಿಸಿ, ನಿರ್ಮಲ ವಂದಿಸಿದರು.