ಬ್ಯಾಡಗಿ: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಗಾಗಿ ಹಾಗೂ ಜಾತಿ ಆಧರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ಸಮಾನತೆ ಉತ್ತೇಜನಕ್ಕೆ ಡಾ. ಅಂಬೇಡ್ಕರ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಬಲಿಷ್ಠ ಕಾನೂನು ರಚಿಸುವ ಮೂಲಕ ಭಾರತಕ್ಕೊಂದು ಉತ್ತಮ ಪ್ರಜಾಪ್ರಭುತ್ವದ ನೀಡಿದ್ದಾಗಿ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ ಭವನದ ಬಳಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ ಅವರ 134ನೇ ಹಾಗೂ ಬಾಬು ಜಗಜೀವನರಾಮ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಬಿ.ಆರ್. ಅಂಬೇಡ್ಕರ ಅವರೊಬ್ಬ ಹಿಂದುಳಿದ ವರ್ಗಗಳ ಸರ್ವೋಚ್ಚ ನಾಯಕ. ಸಾಮಾಜಿಕ ಸುಧಾರಕ ಮತ್ತು ಸಮಾನತೆಯ ಪ್ರತಿಪಾದಕ ಎಂಬುದರಲ್ಲಿ ಎರಡು ಮಾತಿಲ್ಲ, ಅಂಬೇಡ್ಕರ ನಡೆಸಿದ ನಿರಂತರ ಪ್ರಯತ್ನದಿಂದ ವಿನಾಶದ ಅಂಚಿನಲ್ಲಿರುವ ಸಮುದಾಯಗಳನ್ನು ಮೇಲಕ್ಕೆತ್ತಲು ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧದ ಅವರ ಹೋರಾಟವು ಭಾರತದ ಸಾಮಾಜಿಕ ಮತ್ತು ರಾಜಕೀಯ ದೃಶ್ಯದ ಮೇಲೆ ಅಳಿಸಲಾಗದ ಗುರುತುಗಳನ್ನು ಬಿಟ್ಟಿವೆ ಎಂದರು.
ದಲಿತ ಹಕ್ಕುಗಳಿಗಾಗಿ ಪ್ರತಿಪಾದನೆ: ಅಸ್ಪೃಶ್ಯತೆ, ಸತಿ ಸಹಗಮನ, ಬಾಲ್ಯವಿವಾಹ, ನರಬಲಿ ಪದ್ಧತಿ, ಹಿಂದುಳಿದವರಿಗೆ ದೇವಾಲಯಗಳಲ್ಲಿ ಪ್ರವೇಶ ನಿಷೇಧ ಇನ್ನಿತರ ಸಾಮಾಜಿಕ ಪಿಡುಗುಗಳು ವ್ಯಾಪಕವಾಗಿದ್ದ ವೇಳೆ ಸಂಘಟನೆ, ಶಿಕ್ಷಣ, ಹೋರಾಟ ಎಂಬ ಮಂತ್ರದೊಂದಿಗೆ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ ನಿರಂತರ ಪ್ರಯತ್ನವಿದೆ. ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಲು ಅಪಾರ ಸವಾಲುಗಳನ್ನು ಎದುರಿಸಿದ್ದು ಇಂದಿಗೂ ಸಾಕ್ಷಿಯಾಗಿವೆ ಎಂದರು.ಇದಕ್ಕೂ ಮುನ್ನ ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಸದಸ್ಯರಾದ ಫಕ್ಕೀರಮ್ಮ ಛಲವಾದಿ, ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ವಿಜಯ ಮಾಳಗಿ, ತಾಪಂ ಟಿಇಒ ಕೆ.ಎಂ. ಮಲ್ಲಿಕಾರ್ಜುನ ಸಮಾಜದ ಮುಖಂಡರಾದ ಸುರೇಶ ಆಸಾದಿ, ಶಿವಾನಂದ ಯಮನಕ್ಕನವರ, ನಾಗರಾಜ ಹಾವನೂರ, ಶಿವಪ್ಪ ಅಂಬಲಿ, ಸೋಮಣ್ಣ ಮಾಳಗಿ, ತಿಮ್ಮಣ್ಣ ವಡ್ಡರ, ರಮೇಶ ಸುತ್ತಕೋಟಿ, ನಿವೃತ್ತ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ರವಿ ಹುಣಶೀಮರದ, ಹನುಮಂತ ಲಮಾಣಿ, ಹನುಮಂತ ಕಾಟೇನಹಳ್ಳಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮೆರವಣಿಗೆ: ತಹಸೀಲ್ದಾರ್ ಕಚೇರಿಯಿಂದ ಅಂಬೇಡ್ಕರ ಭವನದವರೆಗೆ ಡಾ. ಬಿ.ಆರ್. ಅಂಬೇಡ್ಕರ ಹಾಗೂ ಬಾಬು ಜಗಗಜೀವನರಾಮ ಅವರ ಭಾವಚಿತ್ರಗಳನ್ನು ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ಶಾಸಕ ಬಸವರಾಜ ಶಿವಣ್ಣನವರ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.