ಸಾಂವಿಧಾನಿಕ ವಾಕ್‌ ಸ್ವಾತಂತ್ರ್ಯ ದಮನಿಸುವ ಕಾರ್ಯ: ಶಿವಾನಂದ ಮೆಂಡನ್

KannadaprabhaNewsNetwork |  
Published : Oct 17, 2024, 12:05 AM IST
11 | Kannada Prabha

ಸಾರಾಂಶ

ಬಜರಂಗದಳ ಉಳ್ಳಾಲ ನಗರ, ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುತ್ತದೆ. ಹಿಂದೂಗಳು ಇನ್ನೂ ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ. ಯಾವುದೇ ತಪ್ಪು ಮಾಡದ ಅರುಣ್ ಉಳ್ಳಾಲ್ ಮೇಲಿನ ಕೇಸ್‌ ದಾಖಲಿಸಿರುವ ನಡೆ ಖಂಡನೀಯ ಎಂದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಸಾಂವಿಧಾನಿಕವಾಗಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಧರ್ಮದ ವಿಚಾರಧಾರೆಗಳ ಕುರಿತು ಹಿಂದೂ ಸಮಾಜಕ್ಕೆ ಹೇಳಿರುವ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸುವ ರಾಜ್ಯ ಸರ್ಕಾರ, ಅಸಾಂವಿಧಾನಿಕವಾಗಿ ಧರ್ಮವನ್ನು ಹಿಯಾಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಇರುವುದು ತಾರತಮ್ಯವಲ್ಲವೇ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಹಾಗೂ ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ವಿರುದ್ಧ ದಾಖಲಾಗಿರುವ ಸುಮೊಟೊ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕಿನ್ಯಾದಲ್ಲಿ ಜರಗಿದ ನವ ದಂಪತಿ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಉಪನ್ಯಾಸಕ ಅರುಣ್ ಉಳ್ಳಾಲ್, ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನ ಅಣಕಿಸಿ ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ‍್ಯ ಇಲ್ಲವೇ..?. ದೈವ ,ದೇವರನ್ನು ಹಿಯಾಳಿಸಿದ ಮಂಗಳೂರಿನ ಖಾಸಗಿ ಶಾಲಾ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಧರ್ಮ ಜಾಗೃತಿಯ ಮಾತುಗಳನ್ನಾಡಿದರೆ ಸುಮೋಟೊ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿಸಿದರು. ಬಜರಂಗದಳ ಉಳ್ಳಾಲ ನಗರ, ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುತ್ತದೆ. ಹಿಂದೂಗಳು ಇನ್ನೂ ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ. ಯಾವುದೇ ತಪ್ಪು ಮಾಡದ ಅರುಣ್ ಉಳ್ಳಾಲ್ ಮೇಲಿನ ಕೇಸ್‌ ದಾಖಲಿಸಿರುವ ನಡೆ ಖಂಡನೀಯ ಎಂದರು.

ವಿಶ್ವ ಹಿಂದೂ ಪರಿಷತ್‌ನ ಮಠ, ಮಂದಿರ, ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ವಿ.ಹಿಂ.ಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಉಪಾಧ್ಯಕ್ಷ ಮನೋಹರ್ ಸುವರ್ಣ, ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ ಕುತ್ತಾರು, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷ ಜಗದೀಶ ಆಳ್ವ, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್ , ಲಲಿತಾ ಸುಂದರ್, ಜಗದೀಶ ಶೇಣವ ಮೊದಲಾದವರು ಉಪಸ್ಥಿತರಿದ್ದರು.ವಿ.ಹಿಂ.ಪ ಜಿಲ್ಲಾ ಪ್ರಚಾರ ಮತ್ತು ಪ್ರಸಾರ ವಿಭಾಗದ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಸ್ವಾಗತಿಸಿ ನಿರೂಪಿಸಿದರು. ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು .ಪ್ರಮುಖರಾದ ಹರಿಪ್ರಸಾದ್ ಕೈರಂಗಳ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ