ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿರಾಜ್ಯ ಹೆದ್ದಾರಿ ಹಾದು ಹೋಗುವ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಕೇವಲ 500 ಮೀ. ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಒಂಬತ್ತು ವೃತ್ತಗಳು ತಲೆ ಎತ್ತಿವೆ. ಆದರೆ, ಈ ವೃತ್ತಗಳನ್ನು ಯಾರು ನಿರ್ಮಿಸಿದ್ದಾರೆ? ಏಕೆ ನಿರ್ಮಿಸಿದ್ದಾರೆ? ಅನುಮತಿ ಸಿಕ್ಕ ಮೇಲೆ ತೆಗೆದುಕೊಂಡಿದ್ದಾರೆ ಎಂಬ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ, ಈಗ ಏಕಾಏಕಿ 9 ವೃತ್ತಗಳ ನಿರ್ಮಾಣ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ.
8 ಸಾವಿರದಿಂದ 10 ಸಾವಿರ ಜನಸಂಖ್ಯೆ ಹೊಂದಿರುವ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ-41ರ ಶಿರಾಡೋಣ ರಸ್ತೆ ಹಾಗೂ ದೇವರಹಿಪ್ಪರಗಿ-ಇಂಡಿ ರಸ್ತೆ ಹಾಗೂ ತಾಂಡಾ ರಸ್ತೆಯಲ್ಲಿ ಶನಿವಾರ ರಾತ್ರೋರಾತ್ರಿ 9 ವೃತ್ತಗಳನ್ನು ಕಾನೂನು ಬಾಹಿರವಾಗಿ ರಸ್ತೆಯ ಮಧ್ಯೆಯೇ ನಿರ್ಮಿಸಲಾಗಿದೆ. ಇದಕ್ಕೆಲ್ಲ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ.ಚಿಕ್ಕರೂಗಿ ಸ್ವಾತಂತ್ರ್ಯ ಹೋರಾಟಗಾರರ ತವರೂರು. ಗ್ರಾಮದ ಸುಮಾರು 19 ಜನ ಸೇರಿದಂತೆ ಸುತ್ತಮುತ್ತಲಿನ 35ಕ್ಕೂ ಹೆಚ್ಚು ಜನರು ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿಗಾಗಿ ಇಂಡಿ-ದೇವರಹಿಪ್ಪರಗಿ ರಸ್ತೆ ಮಧ್ಯೆ ಚಿಕ್ಕ ವೃತ್ತ ನಿರ್ಮಾಣ ಮಾಡಿ ಈಗಾಗಲೇ ಸ್ವಾತಂತ್ರ್ಯ ಯೋಧರ ವೃತ್ತ ಎಂದು ಈಗಾಗಲೇ ಅಧಿಕೃತವಾಗಿ ಹೆಸರಿಟ್ಟಿದೆ. ಆದರೆ, ಈಗ ರಸ್ತೆಯನ್ನು ಮೇಲ್ದರ್ಜೆಗೇರಿಸಿದ್ದು, ಇದ್ದಕ್ಕಿದ್ದಂತೆ ಶನಿವಾರ ಕಳೆದು ಭಾನುವಾರ ಆಗುವುದರೊಳಗೆ 9 ಅನಧಿಕೃತ ವೃತ್ತಗಳನ್ನು ನಿರ್ಮಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
ಕೋಮು ಸೌಹಾರ್ದದಿಂದ ಬಾಳುತ್ತಿರುವ ಅಲ್ಲಿನ ಗ್ರಾಮಸ್ಥರಿಗೆ ವೃತ್ತಗಳಿಂದ ಏನಾಗಬಹುದು ಎಂಬ ಚಿಂತೆ ಕೂಡ ಕಾಡತೊಡಗಿದೆ. ಯಾವುದೇ ಮುಖ್ಯ ರಸ್ತೆಗಳ ಮಧ್ಯೆ ವೃತ್ತಗಳನ್ನು ಅನುಮತಿ ಇಲ್ಲದೆ ನಿರ್ಮಿಸಬಾರದು. ಅಲ್ಲದೇ ಅಲ್ಲಿದ್ದ ಜನರಿಗೆ ವೃತ್ತ ನಿರ್ಮಾಣದಿಂದ ತೊಂದರೆಯಾಗಬಾರದು ಎಂಬ ಕಾನೂನು ಇದೆ. ಆದರೆ, ಅದ್ಯಾವುದೂ ಕೂಡ ಇಲ್ಲಿ ಪಾಲನೆಯಾದಂತೆ ಕಂಡುಬಂದಿಲ್ಲ. ರಸ್ತೆಯ ಪಕ್ಕದಲ್ಲಿ ವೃತ್ತಗಳ ಫಲಕಗಳು ಹಾಕಲಿ. ಅದನ್ನು ಬಿಟ್ಟು ರಸ್ತೆ ಮಧ್ಯದಲ್ಲಿ ಹಾಕುವುದನ್ನು ನಿಲ್ಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.ಚಿಕ್ಕರೂಗಿ ಗ್ರಾಮದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 9 ವೃತ್ತಗಳಿಗೆ ಸಂಗೊಳ್ಳಿ ರಾಯಣ್ಣ, ಅಬ್ದುಲ್ ಕಲಾಂ, ಜ್ಯೋತಿಬಾಪುಲೆ, ಟಿಪ್ಪು ಸುಲ್ತಾನ್, ರಾಣಿ ಚನ್ನಮ್ಮ, ಕನ್ನಡಾಂಬೆ, ವಾಲ್ಮೀಕಿ, ಅಂಬಿಗರ ಚೌಡಯ್ಯ, ಕನಕದಾಸ ಸೇರಿ ಹಲವು ಶರಣ ಮಹಾಪುರುಷರ ಹೆಸರಿಡಬಹುದು ಎಂಬ ಲೆಕ್ಕಾಚಾರ ಕೂಡ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಆದರೆ, ಮುಂದೇನಾಗುತ್ತದೆ ಎಂದು ಈಗಲೇ ಹೇಳಲಾಗುತ್ತಿಲ್ಲ. ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗದಂತೆ ವೃತ್ತಗಳ ನಿರ್ಮಾಣ ಮಾಡಬೇಕು ಎಂಬುದು ಕೆಲವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅ.28ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ನೇತೃತ್ವದ ತಹಸೀಲ್ದಾರ್ ಅವರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜತೆಗೆ ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡ ಪಾಲ್ಗೊಳ್ಳಲಿದ್ದಾರೆ.
-------------ಕೋಟ್...
ಸೋಮವಾರ ಗ್ರಾಮಕ್ಕೆ ಹೋಗಿ ಪರಿಶೀಲನೆ ಮಾಡುವೆ. ಜತೆಗೆ ಗ್ರಾಮದಲ್ಲಿರುವ ಎಲ್ಲ ಸಮುದಾಯದವರ ಸಭೆ ಕರೆಯಲಾಗಿದ್ದು, ಅವರಿಗೆ ವೃತ್ತಗಳ ಕುರಿತಾಗಿ ಮನವರಿಕೆ ಮಾಡುವೆ. ಸಭೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ಆಗಮಿಸುವರು. ಎಲ್ಲ ಸಮುದಾಯವರನ್ನು ಕರೆದು ಮನವರಿಕೆ ಮಾಡಿ ಹೇಳುತ್ತೇವೆ. ಕುರಿತು ಈಗಾಗಲೇ ಪಿಡಿಒ ಅವರಿಗೆ ಸೂಚನೆ ನೀಡಿ ಮಾಹಿತಿ ಪಡೆಯಲು ಹೇಳಿರುವೆ.- ಪ್ರಕಾಶ ಸಿಂದಗಿ, ತಹಸೀಲ್ದಾರ, ದೇವರಹಿಪ್ಪರಗಿ