ರಾಮನಗರ: ನಗರದ 28ನೇ ವಾರ್ಡಿನ ಕುವೆಂಪು ನಗರ ಬಡಾವಣೆಯಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗ ಅನುಕೂಲವಾಗುವಂತೆ ಬಯಲು ರಂಗ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರದಲ್ಲಿರುವ ಎಲ್ಲ ಉದ್ಯಾವನಗಳಿಗೆ ಕುವೆಂಪು ಉದ್ಯಾನವನ ಮಾದರಿಯಾಗಿದೆ. ನಿವೃತ್ತ ಸರ್ಕಾರಿ ನೌಕರರು ಕುವೆಂಪುರವರ ಹೆಸರಿನಲ್ಲಿ ಬಳಗ ಕಟ್ಟಿಕೊಂಡು ಉದ್ಯಾನವನ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ. ಜನರು ಮನಸ್ಸು ಮಾಡಿದರೆ ಒಳ್ಳೆಯ ವಾತಾವರಣ ಸೃಷ್ಟಿಸಬಹುದು ಎಂಬುದನ್ನು ಬಳಗ ತೋರಿಸಿದೆ. ಬೇರೆ ಕಡೆಗಳಲ್ಲಿರುವ ಪಾರ್ಕ್ ಗಳ ನಿರ್ವಹಣೆ ಜವಾಬ್ದಾರಿ ಹೊರಲು ಯಾರಾದರು ಮುಂದೆ ಬಂದರೆ ಅವಕಾಶ ನೀಡುವುದಾಗಿ ತಿಳಿಸಿದರು.
ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಪರಿಸರ ನಮ್ಮೆಲ್ಲರ ಮುಂದಿರುವ ಸವಾಲು. ನಗರಸಭೆಯಿಂದ ಮಾತ್ರ ಸ್ವಚ್ಛ ಸುಂದರ ನಗರ ರೂಪಿಸಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರು ಕೖಜೋಡಿಸಬೇಕು. ನಗರಸಭೆ ಸ್ವಚ್ಛ ನಗರ ನಿರ್ಮಾಣ ಮಾಡುವ ಜೊತೆಗೆ ಅಸಂಘಟಿತ ಕಾರ್ಮಿಕರ ಆದಿಯಾಗಿ ಎಲ್ಲ ಬಡ ವರ್ಗಗಳ ಜನರಿಗೆ ಸವಲತ್ತು ಒದಗಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ರಾಮನಗರ ನಗರಸಭೆ ಇಡೀ ದೇಶದಲ್ಲಿಯೇ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ ಎಂದು ಕೆ.ಶೇಷಾದ್ರಿ ಹೇಳಿದರು.ನಗರಸಭೆ ಸದಸ್ಯೆ ಪಾರ್ವತಮ್ಮ ಮಾತನಾಡಿ, ನಿವೃತ್ತ ನೌಕರರು ಜೇನುಗೂಡಿನಂತೆ ಕುವೆಂಪು ಹೆಸರಿನಲ್ಲಿ ಬಳಗ ಕಟ್ಟಿಕೊಂಡು ಉದ್ಯಾನವನ ನಿರ್ವಹಣೆ ಮಾಡುತ್ತಿರುವ ಖುಷಿಯ ವಿಚಾರ. ನಗರಸಭೆ ಪಾರ್ಕುಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುತ್ತಿದೆ. ಕುವೆಂಪು ಉದ್ಯಾನವನಕ್ಕೆ 25 ಲಕ್ಷ ಹಾಗೂ ರಂಗರಾಯನದೊಡ್ಡಿ ಕೆರೆ ಪಾರ್ಕಿನ ಅಭಿವೃದ್ಧಿಗೆ 30 ಲಕ್ಷ ಮೀಸಲಿಟ್ಟಿದೆ ಎಂದು ಹೇಳಿದರು.
ನಗರಸಭೆ ಆಯುಕ್ತ ಜಯಣ್ಣ ಮಾತನಾಡಿ, ನಗರದ ಸೌಂದರ್ಯ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಉದ್ಯಾನವನಗಳು ಅಗತ್ಯವಿದ್ದು, ಅದರಂತೆ ನಿರ್ವಹಣೆಯೂ ಮುಖ್ಯವಾಗಿದೆ. ಕುವೆಂಪು ಹೆಸರಿನಲ್ಲಿ ರಚನೆಗೊಂಡಿರುವ ಬಳಗ ಕುವೆಂಪುರವರ ಆಶಯಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-------------------------
ರಾಮನಗರದ ಕುವೆಂಪು ನಗರ ಬಡಾವಣೆಯ ಕುವೆಂಪು ಉದ್ಯಾನವನ ನಿರ್ವಹಣೆ ಜವಾಬ್ದಾರಿಯನ್ನು ರಾಷ್ಟ್ರಕವಿ ಕುವೆಂಪು ಉದ್ಯಾನವನ ಅಭಿವೃದ್ಧಿ ಬಳಗಕ್ಕೆ ಹಸ್ತಾಂತರಿಸಲಾಯಿತು.