ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕಾಗಿ ಕಳೆದ 15 ವರ್ಷದಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದು ಶಾಸಕರು ನೀಡಿದ ಗಡುವು ಆ.15ಕ್ಕೆ ಕೊನೆಗೊಳ್ಳಲಿದ್ದು, ಅಂದಿನಿಂದಲೇ ಮುಖ್ಯರಸ್ತೆಯಲ್ಲಿ ಬೃಹತ್ ತಗ್ಗುಗಳನ್ನು ತೆಗೆದು ಶಾಶ್ವತವಾಗಿ ಸ್ಥಗಿತಗೊಳಿಸಲಿದ್ದೇವೆ ಎಂದು ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಎಚ್ಚರಿಕೆ ನೀಡಿದರು.
ಭರವಸೆ ಕಳೆದುಕೊಂಡ ಅಧಿಕಾರಿಗಳು: ಜನಪ್ರತಿನಿಧಿಗಳ ಬೇಜವಾಬ್ದಾರಿತಕ್ಕೆ ಕಳೆದ 15 ವರ್ಷಗಳಿಂದ ಮುಖ್ಯರಸ್ತೆ ಅಗಲೀಕರಣ ಕೆಲಸ ಮರೀಚಿಕೆಯಾಗಿ ಉಳಿದಿದೆ, ಪಟ್ಟಣ ಅಭಿವೃದ್ಧಿ ಕಾಣದೆ ಶಾಪಗ್ರಸ್ಥವಾಗಿದೆ ಸುಸಜ್ಜಿತ ರಸ್ತೆಯಿಲ್ಲದೇ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ವಿಶ್ವಪ್ರಸಿದ್ದ ಬ್ಯಾಡಗಿ ನಗರದಲ್ಲಿ ಮುಖ್ಯರಸ್ತೆ ಓಡಾಡಿದವರು ಹಿಡಿಶಾಪ ಹಾಕದೇ ಹೋಗಲು ಸಾಧ್ಯವಿಲ್ಲ. ಜನರ ಭರವಸೆ ಕಳೆದುಕೊಂಡ ಮೇಲೆ ಅಧಿಕಾರಿಗಳು ಇಲ್ಲಿ ಮುಂದುವರೆಯಲು ನೈತಿಕ ಹಕ್ಕು ಕಳೆದುಕೊಂಡಿದ್ದು ಇಲ್ಲಿಂದ ನಿರ್ಗಮಿಸುವಂತೆ ಆಗ್ರಹಿಸಿದರು.
ಯಾವುದೇ ಕೋರ್ಟ್ ತಡೆಯಾಜ್ಞೆಗಳಿಲ್ಲ:ಎಂ.ಎಲ್. ಕಿರಣಕುಮಾರ ಮಾತನಾಡಿ, ಮಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆಗಳಿಲ್ಲ, ಅಗಲೀಕರಣ ವಿಷಯದಲ್ಲಿ ಸರಿಯಾದ ದಾಖಲೆಗಳನ್ನು ನೀಡದೆ ಪಿಡಬ್ಲೂಡಿ ಅಧಿಕಾರಿಗಳು ಪದೇಪದೇ ಅಗಲೀಕರಣ ಹಿನ್ನಡೆಗೆ ಕಾರಣವಾಗುತ್ತಿದ್ದಾರೆ. ಪ್ರಾಥಮಿಕ ಅಧಿಸೂಚನೆ (ಪ್ರೈಮರಿ ನೋಟಿಫಿಕೇಶನ್ ) ಹೊರಡಿಸಿ ಒಂದು ವರ್ಷದ ಒಳಗೆ ಅಂತಿಮ ಅಧಿಸೂಚನೆ (ಫೈನಲ್ ನೋಟಿಫಿಕೇಶನ್ ) ಹೊರಡಿಸಬೇಕು, ಆದರೆ ಪಿಡಬ್ಲೂಡಿ ಅಧಿಕಾರಿಗಳು ಸದರಿ ಕೆಲಸವನ್ನು ಮಾಡದೇ 7 ತಿಂಗಳು ಸುಮ್ಮನೇ ಕಾಲಹರಣ ಮಾಡಿದ್ದಾರೆ ಅಗಲೀಕರಣವನ್ನು ಮತ್ತೆ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.