ಸೋಲಾರ್‌ ಪಾರ್ಕ್‌ ನಿರ್ಮಾಣ: ಪ್ರತಿ ಎಕರೆಗೆ 25,200 ರು. ನಿಗದಿ

KannadaprabhaNewsNetwork | Updated : Jun 21 2024, 12:59 PM IST

ಸಾರಾಂಶ

ತಾಲೂಕಿನ ರ್‍ಯಾಪ್ಟೆ ಗ್ರಾಪಂ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ ರೈತರ ಜಮೀನಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ನಡೆಯುತ್ತಿದ್ದು, ಪ್ರತಿ ಎಕರೆಗೆ 25,200 ರು. ದರ ನಿಗದಿಪಡಿಸಲಾಗಿದೆ ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಪಾವಗಡ : ತಾಲೂಕಿನ ರ್‍ಯಾಪ್ಟೆ ಗ್ರಾಪಂ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ ರೈತರ ಜಮೀನಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣ ನಡೆಯುತ್ತಿದ್ದು, ಪ್ರತಿ ಎಕರೆಗೆ 25,200 ರು. ದರ ನಿಗದಿಪಡಿಸಲಾಗಿದೆ ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ತಾಲೂಕಿನ ರ್‍ಯಾಪ್ಟೆ ಗ್ರಾಪಂಯಲ್ಲಿ ಕರ್ನಾಟಕ ಸೋಲಾರ್‌ ಪವರ್‌ ಡವಲೆಪ್‌ ಮೆಂಟ್‌ ಕಾರ್ಪೋರೇಷನ್‌ ವತಿಯಿಂದ ಹಮ್ಮಿಕೊಂಡಿದ್ದ ಸೋಲಾರ್‌ ಘಟಕಗಳ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ವಾರ್ಷಿಕ ದರ ನಿಗದಿ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ ಹಾಗೂ ವಳ್ಳೂರು ಗ್ರಾಪಂಗಳ 13ಸಾವಿರ ಎಕರೆ ರೈತರ ಜಮೀನುಗಳಲ್ಲಿ 2,250 ಮೆಗಾ ವ್ಯಾಟ್‌ ವಿದ್ತುತ್‌ ಉತ್ಪಾಧನೆಯ ಸೌರಶಕ್ತಿ ಘಟಕಗಳು ಕಾರ್ಯಾರಂಭದಲಿವೆ. ವಿಶ್ವ ಭೂಪಟದಲ್ಲಿ ಪಾವಗಡ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ಇನ್ನೂ 2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ವಿಚಾರವಾಗಿ ಸರ್ಕಾರದ ಗಮನ ಸೆಳೆದಿದ್ದೇವೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಒಪ್ಪಿಗೆ ನೀಡಿದ್ದರಿಂದ ರ್‍ಯಾಪ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೂ 12 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್‌ ಘಟಕಗಳು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ 8 ಸಾವಿರ ಎಕರೆ ಜಮೀನು ನೀಡಲು ರೈತರ ಮುಂದೆ ಬಂದಿದ್ದು, ಇನ್ನೂ ನಾಲ್ಕು ಸಾವಿರ ಎಕರೆ ಜಮೀನಿನ ಅಗತ್ಯವಿದೆ. ಸೋಲಾರ್‌ ಪಾರ್ಕ್‌ಗಳ ನಿರ್ಮಾಣಕ್ಕೆ ಗುತ್ತಿಗೆ ಅದಾರದ ಮೇಲೆ ಸರ್ಕಾರಕ್ಕೆ ತಮ್ಮ ಜಮೀನನ್ನು ನೀಡಬೇಕು. ರೈತರು ಒಪ್ಪಿಗೆ ನೀಡಿದರೆ ನಾಳೆಯಿಂದಲೇ ತಮ್ಮ ಜಮೀನುಗಳಲ್ಲಿ ಸೌರಶಕ್ತಿ ಘಟಕಗಳ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿ, ಈ ಭಾಗದ ರೈತರ ಸಮಸ್ಯೆ ಆಲಿಸಿದ್ದೇನೆ. ಎಕರೆಗೆ ಪ್ರತಿ ವರ್ಷ 25200 ರು.ದರ ನಿಗಧಿಪಡಿಸಲಾಗಿದೆ ಎಂದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಈ ಭಾಗದ ರೈತರ ಜಮೀನುಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ನೀರಾವರಿ ಜಮೀನುಗಳಿದ್ದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಧರ ನಿಗಧಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯ ಕೆಪಿಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ ಮಾತನಾಡಿ, ಈ ಭಾಗದಲ್ಲಿ ಸೋಲಾರ್‌ ಪಾರ್ಕ್‌ಗಳ ನಿರ್ಮಾಣದಿಂದ ರೈತರ ಜೀವನ ಮಟ್ಟ ಸುಧಾರಣೆ ಕಾಣಲಿದೆ. ಸೌರಶಕ್ತಿ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಸೇರಿದಂತೆ ಸೋಲಾರ್‌ ವಿಶೇಷ ನಿಧಿಯಲ್ಲಿ ಈ ಭಾಗದ ಶಾಲಾ ಕಾಲೇಜು ರಸ್ತೆ,ಚರಂಡಿ ಹಾಗೂ ಇತರೆ ಮೂಲಭೂತ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು.

ಕೆಪಿಡಿಸಿಎಲ್‌ನ ಸಿಇಒ ಅಮರನಾಥ್, ಸೋಲಾರ್‌ ಪವರ್‌ ಡವಲೆಪ್‌ಮೆಂಟ್‌ ಎಡಿಸಿ ಶಿವನಂದಕರಳಿ, ಮುಖ್ಯ ಕಾರ್ಯನಿರ್ವಹಕ ಎಂಜಿನಿಯರ್‌ ಉಮೇಶ್‌, ತಹಸೀಲ್ದಾರ್‌ ವರದರಾಜ್‌, ಚನ್ನಕೇಶವ, ಪಿ.ಎಚ್‌.ರಾಜೇಶ್‌, ತೆಂಗಿನಕಾಯಿ ರವಿ, ಸಾಂಬಸದಾಶಿವರೆಡ್ಡಿ, ಅಂಜಿನಮ್ಮ, ಲೋಕೇಶ್‌ ಚೌದರಿ, ಇಂದ್ರಾಣಮ್ಮ, ಅಜಯ್‌ನಾಯ್ಕ್‌, ವಿಶ್ವನಾಥ್‌ಗೌಡ, ಅಪ್ಪಾಜಿಹಳ್ಳಿಯ ಆನಂದರೆಡ್ಡಿ, ಕೆ.ವಿ.ನರಸರೆಡ್ಡಿ, ಕ್ಯಾತಗಾನಕೆರೆ ಶ್ರೀನಿವಾಸಲು, ಹನುಮಂತರಾಯಪ್ಪ ಇದ್ದರು.

Share this article