3ನೇ ಹಂತದ ಶುದ್ಧೀಕರಣ ಘಟಕ ನಿರ್ಮಾಣ ಮರೀಚಿಕೆ

KannadaprabhaNewsNetwork |  
Published : Jul 23, 2024, 12:38 AM IST
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಧಾನಸಭೆಯಲ್ಲಿ ಸೋಮವಾರ ಸ್ಥಳೀಯ ಶಾಸಕ ಧೀರಜ್‌ ಮುನಿರಾಜ್‌ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, 3ನೇ ಹಂತದ ನೀರು ಶುದ್ಧೀಕರಣ ಘಟಕ ನಿರ್ಮಾಣ ಕ್ರಿಯಾಯೋಜನೆ, ಟೆಂಡರ್‌ ಇಲಾಖೆ ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯ ತ್ಯಾಜ್ಯ ನೀರು ಶುದ್ಧೀಕರಣ ಮಾಡುವ ಎಸ್‌ಟಿಪಿ ಘಟಕ ಬದಲಾಯಿಸಲು ಮೂರನೇ ಹಂತದ ಶುದ್ಧೀಕರಣ ಘಟಕ ಟೆಂಡರ್, ಕ್ರಿಯಾ ಯೋಜನೆ ಕುರಿತು ಶಾಸಕರು ಪ್ರಶ್ನಿಸಿದ್ದರು.

-ಚಿಕ್ಕತುಮಕೂರು ಕೆರೆಯಲ್ಲಿನ ಎಸ್‌ಟಿಪಿ ಘಟಕ ಬದಲಾವಣೆ

-ಶಾಸಕ ಧೀರಜ್ ಮುನಿರಾಜ್ ವಿಧಾನಸಭೆಯಲ್ಲಿ ಪ್ರಶ್ನೆ

-ಪ್ರಸ್ತಾವಿತ ಕ್ರಿಯಾಯೋಜನೆ, ಟೆಂಡರ್‌ ಇಲಾಖೆ ಮುಂದಿಲ್ಲ: ಸಚಿವ ಬೈರತಿ ಸುರೇಶ್‌ ಉತ್ತರಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕೆರೆ ಮಾಲಿನ್ಯದ ವಿರುದ್ಧ ಬೃಹತ್‌ ಹೋರಾಟ ರೂಪುಗೊಂಡಿರುವುದಕ್ಕೆ ಪೂರಕವಾಗಿ ವಿಧಾನಸಭೆಯಲ್ಲಿ ಸೋಮವಾರ ಸ್ಥಳೀಯ ಶಾಸಕ ಧೀರಜ್‌ ಮುನಿರಾಜ್‌ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, 3ನೇ ಹಂತದ ನೀರು ಶುದ್ಧೀಕರಣ ಘಟಕ ನಿರ್ಮಾಣ ಕ್ರಿಯಾಯೋಜನೆ, ಟೆಂಡರ್‌ ಇಲಾಖೆ ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ನಗರಸಭೆಯ ತ್ಯಾಜ್ಯ ನೀರು ಶುದ್ಧೀಕರಣ ಮಾಡುವ ಎಸ್‌ಟಿಪಿ ಘಟಕ ಬದಲಾಯಿಸಲು ಮತ್ತು 130.50 ಲಕ್ಷ ರುಪಾಯಿ(1.3 ಕೋಟಿ ರು.) ವೆಚ್ಚದ ಮೂರನೇ ಹಂತದ ಶುದ್ಧೀಕರಣ ಘಟಕ ಟೆಂಡರ್, ಕ್ರಿಯಾ ಯೋಜನೆ ಕುರಿತು ಶಾಸಕರು ಪ್ರಶ್ನಿಸಿದ್ದರು.

ಚಿಕ್ಕತುಮಕೂರು ಕೆರೆಯ 37 ಎಕರೆ ವಿಸ್ತೀರ್ಣದಲ್ಲಿ ಎಸ್‌ಟಿಪಿ ಘಟಕ ಇದ್ದು, ಸದ್ಯ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಮಾಡುತ್ತಿರುವ ಈ ಘಟಕ ಅವೈಜ್ಞಾನಿಕವಾಗಿದೆ. ಯಾವುದೇ ರೀತಿಯ ಶುದ್ಧೀಕರಣ ಕೆಲಸ ಆಗುತ್ತಿಲ್ಲ. ಕೆರೆಯ ಒಡಲಿಗೆ ನೇರವಾಗಿ ತ್ಯಾಜ್ಯ ಸೇರಿದ ಪರಿಣಾಮ ಎರಡು ಗ್ರಾಮ ಪಂಚಾಯಿತಿಗಳ 17 ಗ್ರಾಮಗಳಲ್ಲಿನ ಅಂತರ್ಜಲ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ ಎಂದು ಪ್ರಸ್ತಾಪಿಸಿದರು.

ಶುದ್ಧ ನೀರಿಗಾಗಿ ಆಗ್ರಹಿಸಿ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಜನರು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನೂ ಮಾಡಿ ಪ್ರತಿಭಟಿಸಿದ್ದರು. ಬಳಿಕ, ಅಧಿಕಾರಿಗಳ ಮನವೊಲಿಕೆ ಪ್ರಕ್ರಿಯೆ ಬಳಿಕ ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದಿದ್ದರು ಎಂದು ಸದನದ ಗಮನ ಸೆಳೆದರು.

ಎರಡು ಗ್ರಾಮ ಪಂಚಾಯಿತಿಯ ಜನರು ಮೂರನೇ ಹಂತದ ನೀರು ಶುದ್ಧೀಕರಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಘಟಕ ಸ್ಥಾಪಿಸುವ ಭರವಸೆ ನೀಡಿದ್ದರು. ಅದರಂತೆ 130.50 ಲಕ್ಷ ರುಪಾಯಿಗಳ ಕ್ರಿಯಾಯೋಜನೆ ತಯಾರಾಗಿತ್ತು ಎಂದರು.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಚಿಕ್ಕತುಮಕೂರು ಕೆರೆಯಲ್ಲಿರುವ ಎಸ್‌ಟಿಪಿ ಘಟಕ ಬಂದ್ ಮಾಡುವಂತೆ ಸೂಚನೆ ನೀಡಿದೆ. ನಾವು ಸಹ ಈ ವಾದಕ್ಕೆ ಬೆಂಬಲಿಸಿ, ಘಟಕವನ್ನು ಬದಲಾಯಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ಈ ಬಗ್ಗೆ ಯಾವುದೇ ಯೋಜನೆ ಈವರೆಗೆ ಇಲಾಖೆ ಮುಂದೆ ಬಂದಿಲ್ಲ. ಆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ದೊಡ್ಡ ಮೊತ್ತದ ಯೋಜನೆ ಪ್ರಸ್ತಾವನೆ ಇದಾಗಿದ್ದು, ಹಣದ ಲಭ್ಯತೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ