ಕನ್ನಡಪ್ರಭ ವಾರ್ತೆ ನಂಜನಗೂಡುಪತ್ರಕರ್ತರಿಗೆ ನಿವೇಶನ ಕೊಡಿಸುವ ಸಲುವಾಗಿ ಸೂಕ್ತ ಸ್ಥಳವನ್ನು ಗುರುತಿಸಲು ತಹಸೀಲ್ದಾರರಿಗೆ ಸೂಚಿಸುವ ಜೊತೆಗೆ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಹೊರ ತಂದಿರುವ ನೂತನ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರತಿನಿಧಿಸುವ ವರುಣ ಕ್ಷೇತ್ರ ಸಹಾ ನಂಜನಗೂಡು ತಾಲೂಕಿಗೊಳಪಡಲಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನಿವೇಶನದ ಅವಶ್ಯಕತೆ ಇರುವುದನ್ನು ಸಿಎಂ ಗಮನಕ್ಕೆ ತರಲಾಗುವುದು. ಇನ್ನು ಪತ್ರಕರ್ತರ ಸಂಘದ ಎರಡನೇ ಅಂತಸ್ತಿನ ಕಟ್ಟಡ ನಿರ್ಮಿಸಲು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಮಂಜೂರು ಮಾಡಿಕೊಡುವ ಜೊತೆಗೆ ಸ್ಥಳೀಯ ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ಧರಾಮಯ್ಯ ಅವರಿಂದಲೂ ಅನುದಾನವನ್ನು ಕೊಡಿಸಲಾಗುವುದು ಎಂದು ತಿಳಿಸಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಜನ ಸಾಮಾನ್ಯರ ಕುಂದು ಕೊರತೆಗಳನ್ನು ಚುನಾಯಿತ ಜನ ಪ್ರತಿನಿಧಿಗಳ ಗಮನಕ್ಕೆ ತರುವ ಜೊತೆಗೆ ತಾಲೂಕಿನ ಪ್ರಗತಿಗೆ ಶ್ರಮಿಸುತ್ತಿರುವ ಪತ್ರಕರ್ತರಿಗೆ ನಿವೇಶನ ಮತ್ತು ಪತ್ರಕರ್ತರ ಭವನದ ಮುಂದುವರೆದ ಕಾಮಗಾರಿಗೆ ಅನುದಾನವನ್ನು ಕೊಡಿಸಿಕೊಡಲು ಸ್ಥಳೀಯ ಶಾಸಕರು ನೆರವಾಗಲಿದ್ದಾರೆ ಎಂದು ತಿಳಿಸಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಸ್ವಾಮಿ ಮಾತನಾಡಿ, ಪತ್ರಕರ್ತರ ವೃತ್ತಿಗೆ ನೆರವಾಗುವ ಸಲುವಾಗಿ ಸಿಎಸ್ಆರ್ ಅನುದಾನದ ಮೂಲಕ ಲ್ಯಾಪ್‌ಟಾಪ್ ಒದಗಿಸಲು ಶಾಸಕರು ಮುಂದಾಗಬೇಕು ಹಾಗೂ ಭವನದ ಮುಂದುವರೆದ ಕಾಮಗಾರಿಗೆ ಅನುದಾನವನ್ನು ತ್ವರಿತವಾಗಿ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ನೂತನ ವರ್ಷದ ಕ್ಯಾಲೆಂಡರ್ ಅನ್ನು ಶಾಸಕ ದರ್ಶನ್ ಧ್ರುವನಾರಾಯಣ ಬಿಡುಗಡೆಗೊಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಹುಲ್ಲಹಳ್ಳಿ ಮೋಹನ್, ಹಿರಿಯ ಪತ್ರಕರ್ತ ಕೆಂಪೇಗೌಡ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎನ್.ಪಿ. ದೀಪಕ್, ಖಚಾಂಚಿ ಭಾಗ್ಯರಾಜ್, ಸಹ ಕಾರ್ಯದರ್ಶಿ ಬಸವರಾಜು, ಹಿರಿಯ ಪತ್ರಕರ್ತರಾದ ನಂಜನಗೂಡು ಮಧು, ಮಹದೇವ ಪ್ರಸಾದ್, ಹುಲ್ಲಹಳ್ಳಿ ಶ್ರೀನಿವಾಸ್, ಎಂ. ಪ್ರಕಾಶ್, ಪ್ರತಾಪ್, ಗಂಗಾಧರ್, ಹೆಡಿಯಾಲ ಮಹದೇವಸ್ವಾಮಿ, ಸಿ.ಎಂ. ಬಸವರಾಜು, ಚಂದ್ರಶೇಖರ್, ರಾಘವೇಂದ್ರ, ಹುರ ಕೃಷ್ಣಪ್ಪಗೌಡ, ಮಲ್ಕುಂಡಿ ಚೆನ್ನಪ್ಪ, ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.