ಕೊಪ್ಪಳ: ಗ್ರಾಹಕರು ಖರೀದಿಸುವ ಪ್ರತಿಯೊಂದು ಉತ್ಪನ್ನದ ಮೇಲೆ ತಯಾರಿಕೆ ದಿನಾಂಕ,ಉತ್ಪನ್ನದ ಬಳಕೆಯ ಅವಧಿ ಹಾಗೂ ಗುಣಮಟ್ಟದ ಗುರುತು ಸೇರಿದಂತೆ ಉತ್ಪನ್ನದಲ್ಲಿ ಬಳಸಲಾದ ಪದಾರ್ಥ ಪರಿಶೀಲಿಸಿ, ಸರಿಯಾದ ಉತ್ಪನ್ನ ಖರೀದಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ್ ಹೇಳಿದರು.
ಗ್ರಾಹಕರು ಖರೀದಿ ಮಾಡುವ ಪ್ರತಿಯೊಂದು ಉತ್ಪನ್ನ ಗುಣಮಟ್ಟದಿಂದ ಕೂಡಿರುವ ಬಗ್ಗೆ ಹಾಗೂ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಮೋಸ, ತಪ್ಪು ತೂಕ, ಅವಧಿ ಮೀರಿದ ವಸ್ತು ವಿರುದ್ಧ ತಕ್ಷಣ ದೂರು ನೀಡುವ ಜಾಗೃತಿ ಬೆಳೆಸಿಕೊಳ್ಳಬೇಕು. ಎಂಆರ್‌ಪಿ ಗಿಂತ ಹೆಚ್ಚಾಗಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಹಕರು ಮುಂದೆ ಬರಬೇಕು. ಜತೆಗೆ ಪ್ರಜ್ಞಾವಂತರಾದ ವಿದ್ಯಾರ್ಥಿಗಳು ಮತ್ತು ಇಂದಿನ ಯುವಕರು ತಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಅಂದಾಗ ಮಾತ್ರ ದೇಶ ಬದಲಾವಣೆ ಕಾಣಲು ಸಾಧ್ಯ. ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಜಾರಿಗೆ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ರಕ್ಷಣೆಯಿದೆ. ಮೋಸ, ತಪ್ಪು ಜಾಹೀರಾತು ಹಾಗೂ ಕಳಪೆ ಉತ್ಪನ್ನ ವಿರುದ್ಧ ದೂರು ಸಲ್ಲಿಸಿ ನ್ಯಾಯ ಪಡೆಯಲು ಈ ಕಾಯ್ದೆ ಸಹಕಾರಿಯಾಗಿದೆ ಎಂದು ಹೇಳಿದರು.
ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಜಿ.ಇ.ಸೌಭಾಗ್ಯಲಕ್ಷ್ಮೀ ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಉತ್ಪನ್ನ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರಬೇಕು. ಗ್ರಾಹಕರು ತಾವು ಬಳಸುವ ವಸ್ತುಗಳ ಬಗ್ಗೆ ಭಯಮುಕ್ತರಾದಾಗ ಮಾತ್ರ ಸದೃಢ ಆರ್ಥಿಕತೆ ನಿರ್ಮಾಣವಾಗಲು ಸಾಧ್ಯ. ಸುರಕ್ಷಿತ ಉತ್ಪನ್ನ, ಆತ್ಮವಿಶ್ವಾಸದ ಗ್ರಾಹಕರು ಎಂಬ ಘೋಷವಾಕ್ಯ ಕುರಿತು ಮತ್ತು ಕಾನೂನಿನ ಕುರಿತು ಅರಿವು ಮೂಡಿಸಿದರು.ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ರಾಜು ಎನ್.ಮೇತ್ರಿ ಮಾತನಾಡಿ, ಖರೀದಿಸುವ ಪ್ರತಿ ವಸ್ತುಗಳಲ್ಲಿ ಸಿದ್ದಪಡಿಸಿದ ದಿನಾಂಕ ಮತ್ತು ಎಷ್ಟು ದಿನಗಳ ಕಾಲ ಬಳಸಬಹುದು ಎಂಬುದನ್ನು ಗ್ರಾಹಕರು ತಿಳಿದಿರಬೇಕು. ಮಾರಾಟ ಮಾಡುವವರು ವಸ್ತುಗಳ ನಿಖರ ಮಾಹಿತಿ ನೀಡಬೇಕು. ಲಾಭದ ಆಸೆಗೆ ಮನಬಂದಂತೆ ವ್ಯಾಪಾರ ಮಾಡಬಾರದು. ಅಂತಹ ಅನ್ಯಾಯ ನಿಮ್ಮ ಕಣ್ಣಮುಂದೆ ಕಂಡುಬಂದರೆ ಅದರ ವಿರುದ್ಧ ಪ್ರಶ್ನೆ ಮಾಡಬೇಕು ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ವಿಶ್ವನಾಥಗೌಡ ಎಂ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು.