ತುರ್ತು ಕ್ರಮಕ್ಕೆ ಮುಂದಾಗದಿದ್ದರೆ ಬರಲಿರುವ ಜಿಪಂ, ತಾಪಂ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರಮಹದೇವಪ್ಪ ಎಂ. ಸ್ವಾಮಿ
೪ ಸಾವಿರ ಜನಸಂಖ್ಯೆ ಹೊಂದಿರುವ ತಾಲೂಕಿನ ಹೊಳೆ-ಇಟಗಿ ಗ್ರಾಪಂ ವ್ಯಾಪ್ತಿಯ ಸಾಸಲವಾಡ ಗ್ರಾಮದಲ್ಲಿ ಮನೆಯ ನಿತ್ಯದ ಬಳಕೆ ಹಾಗೂ ಕುಡಿಯಲು ಪೂರೈಸುವ ನೀರಿನಲ್ಲಿ ಜೊಂಡು, ಕೊಳಚೆ ಮತ್ತು ಇತರೆ ಕಲ್ಮಶಗಳು ಕಂಡುಬರುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ. ಮೂಲಸೌಕರ್ಯಗಳ ಕೊರತೆಯಿಂದ ತತ್ತರಿಸಿರುವ ಜನತೆಗೆ ಕಲುಷಿತ ಕುಡಿಯುವ ನೀರಿನ ಸಮಸ್ಯೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಗ್ರಾಮದ ಅನತಿ ದೂರದಲ್ಲಿ ತುಂಗಭದ್ರಾ ನದಿ ಹರಿದಿದ್ದರೂ ೨-೩ ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಬಳಕೆಗೆ ಯೋಗ್ಯವಲ್ಲದ ನೀರು ನೋಡಿ ಜನ ಬೇಸತ್ತಿದ್ದಾರೆ. ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಸಬೇಕಾದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೊಂಡುಗಟ್ಟಿದ ಹಾಗೂ ಕಲುಷಿತ ನೀರು ಸರಬರಾಜಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ನೀರಿನ ಪೈಪ್‌ಲೈನ್‌ಗಳಲ್ಲಿ ಸೋರಿಕೆ, ಪೈಪ್‌ಲೈನ್‌ಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು, ನೀರು ಸಂಗ್ರಹಣಾ ತೊಟ್ಟಿಗಳ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಕಲುಷಿತ ನೀರು ಸರಬರಾಜಿಗೆ ಕಾರಣವಾಗಿರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಈ ನೀರನ್ನು ಕುಡಿಯುವುದರಿಂದ ಅತಿಸಾರ, ವಾಂತಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಆರೋಗ್ಯದ ಕುರಿತು ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಒಂದೆಡೆ ಕಲುಷಿತ ನೀರು ಸೇವನೆಯಿಂದ ಹೊಟ್ಟೆನೋವು, ವಾಂತಿ, ಭೇದಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಾಗಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿಯ ಶುದ್ದ ನೀರಿನ ಘಟಕವೂ ಸ್ವಚ್ಛತೆಯಿಲ್ಲದೇ ಗಬ್ಬು ನಾರುತ್ತಿದೆ. ಜನರು ಜೀವದ ಹಂಗು ತೊರೆದು ಕಲುಷಿತ ನೀರನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಮದಲ್ಲಿ ೨-೩ ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಸಂಪೂರ್ಣ ಜೊಂಡುಗಟ್ಟಿದ, ಬಳಕೆಗೆ ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನ ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಪಂಯವರು ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರು, ಮಕ್ಕಳು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರಾದ ಸೋಮಶೇಖರ ಯರಲಕಟ್ಟಿ, ಮಲ್ಲಿಕಾರ್ಜುನ ಅರಳಿ, ಮಂಜುಳಾ ಸಂಗಪ್ಪ ಹರಿಜನ ಎಚ್ಚರಿಸಿದ್ದಾರೆ.ಸದ್ಯ ಬೋರ್‌ವೆಲ್ ನೀರು ಕಡಿಮೆಯಾಗಿದೆ. ಈ ಮೊದಲು ಎಲ್‌ಎನ್‌ಟಿ ಕಂಪನಿಯಿಂದ ನೀರು ಪೂರೈಕೆಯಾಗುತ್ತಿದ್ದು, ಸದ್ಯ ಸ್ಥಗಿತಗೊಳಿಸಿದ್ದಾರೆ. ಜಿಪಂ ಎಇಇ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಪತ್ರ ಬರೆದು ತಿಳಿಸಿದ್ದೇನೆ. ಕೂಡಲೇ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.