ಕಲುಷಿತ ನೀರು ಪೂರೈಕೆ ಕೇಸ್: ಡೀಸಿ ಪರಿಶೀಲನೆ

KannadaprabhaNewsNetwork | Published : May 27, 2024 1:03 AM

ಸಾರಾಂಶ

ಮಧುವನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು‌ ಕುಡಿದು ಗ್ರಾಮಸ್ಥರಲ್ಲಿ ವಾಂತಿಭೇದಿ ಕಾಣಿಸಿಕೊಂಡು 15ಕ್ಕೂ ಹೆಚ್ಚು ಮಂದಿ ಅಸ್ಪಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು‌ ಕುಡಿದು ಗ್ರಾಮಸ್ಥರಲ್ಲಿ ವಾಂತಿಭೇದಿ ಕಾಣಿಸಿಕೊಂಡು 15ಕ್ಕೂ ಹೆಚ್ಚು ಮಂದಿ ಅಸ್ಪಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಬಡಾವಣೆಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.ಈಗಾಗಲೇ ಅಸ್ವಸ್ಥರಾದವರ ಪೈಕಿ ಹಲವರು ಚೇತರಿಸಿಕೊಂಡಿದ್ದಾರೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ, ಹಾಗೆಯೇ ಕಾವೇರಿ ನೀರು ಸರಬರಾಜಿನಲ್ಲಿ ‌ಕೆಶಿಪ್ ರಸ್ತೆ ಅಭಿವೃದ್ಧಿಯಿಂದ ತೊಡಕಾಗಿದ್ದು ಒಂದು ವಾರಗಳ ಕಾಲ ಜಿಲ್ಲಾಡಳಿತದ ವತಿಯಿಂದ ಟ್ಯಾಂಕರ್ ಮೂಲಕ ನೀರನ್ನು ಕಲ್ಪಿಸಲಾಗುವುದು. ಈ ನೀರನ್ನು ಕುಡಿಯಲು ಬಳಸಬೇಕು‌ ಎಂದು ಸೂಚಿಸಿದರು. ಈ ರೀತಿಯ ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆಯಬೇಕೆಂದರು.

ಘಟನೆ ನಡೆದ ಮೇಲೆ ಕಥೆ ಹೇಳುವುದಲ್ಲ:ಘಟನೆ ನಡೆದ ಮೇಲೆ ಕಥೆ ಹೇಳುವುದಲ್ಲ, ಅದಕ್ಕೂ ಮುನ್ನ ಎಚ್ಚರಿಕೆ ವಹಿಸಬೇಕಿತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ತರಾಟೆ ತೆಗೆದುಕೊಂಡರು. ಮಧುವನಹಳ್ಳಿಯಲ್ಲಿ ಕಲುಷಿತ ನೀರು ಪೂರೈಕೆ ಸಂಬಂಧ ಸ್ಥಳಕ್ಕೆ ಬೇಟಿ ನೀಡಿದ ವೇಳೆ ಕೆಲ ಅಧಿಕಾರಿಗಳ ಮಾಹಿತಿ ಆಧರಿಸಿ ನೀವೆಲ್ಲರೂ ಘಟನೆ ನಡೆದ ಮೇಲೆ ಕಥೆ ಹೇಳುತ್ತೀರಿ, ಇದನ್ನು ಮೊದಲೆ ಅರಿಯಬೇಕಿತ್ತು. ಎಂದು ತರಾಟೆ ತೆಗೆದುಕೊಂಡರು.ಮನೇಲಿ ಸಂಗ್ರಹವಾಗಿದ್ದ ನೀರನ್ನು ಚೆಲ್ಲಿ, ಕುಡಿಯಬೇಡಿ:ಮನೆಯಲ್ಲಿ ನೀರು ಸಂಗ್ರಹವಾಗಿದ್ದರೆ ಅಂತಹ ನೀರನ್ನು ಕುಡಿಯಬೇಡಿ, ಚೆಲ್ಲಿಬಿಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಮನವಿ ಮಾಡಿದರು. ಮಧುವನಹಳ್ಳಿಯ ಬಡಾವಣೆಗಳಿಗೆ ಸ್ವತಃ ಭೇಟಿ ನೀಡಿದ ಡಿಸಿ, ಅಜ್ಜಿ ನೀವು ನೀರನ್ನು ಕುಡಿಯಲು ಸಂಗ್ರಹಮಾಡಿಕೊಂಡಿದ್ದರೆ ನೀರು ಸೇವಿಸಬೇಡಿ, ಟ್ಯಾಂಕರ್ ಮೂಲಕ ನೀರು ಬರುತ್ತೆ, ಅದನ್ನು ಸೇವಿಸಿ ಎಂದು ಕಿವಿಮಾತು ಹೇಳಿದರು. ಈ ವೇಳೆ ಒಬ್ಬರು ಮಹಿಳೆಯೊಬ್ಬರು ಈ ನೀರು ಕುಡಿದು ಇಂದು ಸುಸ್ತಾಗುತ್ತಿದೆ ಎನ್ನುತ್ತಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರೋಗ್ಯದಲ್ಲಿ ವ್ಯತ್ಸಾಸ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ. ಶೇಖರಣೆ ಮಾಡಿಕೊಂಡಿರುವ ನೀರನ್ನು ಯಾವುದೆ ಕಾರಣಕ್ಕೂ ಸೇವಿಸಬೇಡಿ ಎಂದು ಸೂಚಿಸಿದರು.ಗ್ರಾಮಕ್ಕೂ ನೀರು ಪೂರೈಸಿ: ಮಾಜಿ ಶಾಸಕ ನರೇಂದ್ರಮಧುವನಹಳ್ಳಿ ಗ್ರಾಮಕ್ಕೂ ಕಾವೇರಿ ನೀರು ಪೂರೈಕೆಯಾಗಬೇಕು ಎಂದು ಮಾಜಿ ಶಾಸಕ ನರೇಂದ್ರ ಹೇಳಿದರು. ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಲುಷಿತ ನೀರು ಸೇವನೆಯಿಂದ 7-8 ಮಂದಿ ಅಸ್ಪಸ್ಥರಾಗಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಇಲ್ಲಿಗೆ ಭೇಟಿ ನೀಡಿದ್ದೇನೆ. ಜಿಲ್ಲಾಡಳಿತ ಇಲ್ಲಿಗೆ ಸೂಕ್ತ ವೈದ್ಯಾಧಿಕಾರಿಗಳ ತಂಡ ಇಲ್ಲಿ ಬೀಡು ಬಿಟ್ಟಿದೆ. ಕಲುಷಿತ ನೀರು ಪೂರೈಸಿದ ಬೋರಿನ ಸಂಪರ್ಕ ಸ್ಥಗಿತಗೊಳಿಸಲು ಅಧಿಕಾರಿ ವರ್ಗ ಕ್ರಮಕೈಗೊಂಡಿದೆ. ಶೀಘ್ರದಲ್ಲೆ ಇಲ್ಲಿಗೆ ಕಾವೇರಿ ನೀರು ಪೂರೈಕೆಗೆ ಕ್ರಮಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನರೇಂದ್ರ, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಮಂಜುಳ, ತಾಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಮಧುವನಹಳ್ಳಿ ಪ್ರಾಥಮಿಕ ಆಸ್ಪತ್ರೆಯ ಡಾ.ಅರುಣ್ ರಾಟೆ, ಪಿಡಿಒ ಶೋಭರಾಣಿ, ಗ್ರಾಮೀಣ ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಹರೀಶ್, ಮಧುವನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಇನ್ನಿತರರಿದ್ದರು.

Share this article