ಮುಂದುವರೆದ ವಿದ್ಯುತ್ ಕಂಬಗಳ ಕುಸಿತ: ಹೆಚ್ಚಿದ ಆತಂಕ

KannadaprabhaNewsNetwork |  
Published : May 27, 2026, 02:30 AM IST
೨೬ ವೈಎಲ್‌ಬಿ ೦೩ಯಲಬುರ್ಗಾ ತಾಲೂಕಿನ ಕರಮುಡಿ-ಬಂಡಿಹಾಳ ಮಾರ್ಗ ಮಧ್ಯೆ ಹೈಟೆನ್ಷನ್ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳು ನೆಲಕ್ಕುರುಳಿರುವುದು. | Kannada Prabha

ಸಾರಾಂಶ

ಗಾಳಿ ಮತ್ತು ಮಳೆಯ ಪರಿಣಾಮ ಹೈಟೆನ್ಷನ್ ವಿದ್ಯುತ್ ಕಂಬ ದುರ್ಬಲಗೊಂಡು ರಸ್ತೆಯ ಮಧ್ಯಭಾಗಕ್ಕೆ ಉರುಳಿ ಬಿದ್ದಿದೆ

ಯಲಬುರ್ಗಾ: ತಾಲೂಕಿನ ಕರಮುಡಿ-ಬಂಡಿಹಾಳ ಮಾರ್ಗ ಮಧ್ಯೆ ಹೈಟೆನ್ಷನ್ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ನೆಲಕ್ಕುರುಳಿದ ಕಾರಣ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಕರಮುಡಿ, ಬಂಡಿಹಾಳ ಸೇರಿದಂತೆ ಸುತ್ತಲಿನ ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಇಡೀ ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.ವಿದ್ಯುತ್ ಕಂಬ ಹಾಗೂ ಗೋಪುರ ಕುಸಿಯುತ್ತಿರುವ ಘಟನೆ ನಡೆಯುತ್ತಿರುವುದರಿಂದ ಸಾರ್ವಜನಿಕರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

ಗಾಳಿ ಮತ್ತು ಮಳೆಯ ಪರಿಣಾಮ ಹೈಟೆನ್ಷನ್ ವಿದ್ಯುತ್ ಕಂಬ ದುರ್ಬಲಗೊಂಡು ರಸ್ತೆಯ ಮಧ್ಯಭಾಗಕ್ಕೆ ಉರುಳಿ ಬಿದ್ದಿದೆ. ಕಂಬದೊಂದಿಗೆ ಅಪಾಯಕಾರಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದರಿಂದ ವಾಹನ ಸವಾರರು ಭಯಭೀತರಾದರು. ಕೆಲವೊತ್ತು ಸಂಚಾರ ಸ್ಥಗಿತಗೊಂಡು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳೀಯರು ಕೂಡಲೇ ವಿದ್ಯುತ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಸಂಚಾರ ತಾತ್ಕಾಲಿಕ ಬಂದ್ ಮಾಡಲಾಯಿತು.

ಅದೃಷ್ಟವಶಾತ್ ಯಾವುದೆ ಜೀವಹಾನಿ ಆಗಿಲ್ಲ. ಇದಕ್ಕೂ ಮೊದಲು ತಾಲೂಕಿನ ವಿವಿಧ ಭಾಗಗಳಲ್ಲಿ ಏಳಕ್ಕೂ ಹೆಚ್ಚು ವಿದ್ಯುತ್ ಗೋಪುರ ಹಾಗೂ ಕಂಬಗಳು ನೆಲಕ್ಕುರುಳಿರುವ ಘಟನೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಜಮೀನುಗಳ ಮಧ್ಯೆ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾಗೂ ಗೋಪುರಗಳು ದುರ್ಬಲ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಕೇವಲ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಮಳೆಯ ಸಂದರ್ಭಗಳಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬೀಳುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ.ರಾತ್ರಿ ವೇಳೆ ವಿದ್ಯುತ್ ಇಲ್ಲದೇ ಮಕ್ಕಳು,ವೃದ್ಧರು ಹಾಗೂ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ. ದುರ್ಬಲಗೊಂಡಿರುವ ಎಲ್ಲ ವಿದ್ಯುತ್ ಕಂಬಗಳು ಹಾಗೂ ಗೋಪುರಗಳ ಸಮಗ್ರ ಪರಿಶೀಲನೆ ನಡೆಸಿ ತಕ್ಷಣ ಬದಲಾಯಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಒಂದಾಗುವ ಕಾಲ ಸನ್ನಿಹಿತ: ರಾಜು ಖಾನಪ್ಪನವರ
ಗ್ಯಾರಂಟಿ ಯೋಜನೆ ಬಡವರಿಗೆ ತಲುಪಿಸಿ: ನಾಗರಾಜ ಮಡಿವಾಳರ