ಹೊನ್ನಾವರ: ತಾಲೂಕಿನಾದ್ಯಂತ ಮುಂಗಾರು ಮಳೆ ಭರ್ಜರಿಯಾಗಿ ಪ್ರಾರಂಭವಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅನಾಹುತಗಳು ಅಲ್ಲಲ್ಲಿ ಆಗುತ್ತಲಿದೆ.
ಹೊನ್ನಾವರ -ಬೆಂಗಳೂರು ಹೈವೇ ಪಕ್ಕದಲ್ಲಿನ ಗಟಾರವನ್ನು ಸ್ವಚ್ಛ ಮಾಡುವ ಕೆಲಸವನ್ನು ಪಟ್ಟಣ ಪಂಚಾಯತ್ ಮಾಡಿಲ್ಲ. ಮೇ ತಿಂಗಳಿನಲ್ಲಿಯೇ ಚಂಡಮಾರುತದ ಪ್ರಭಾವದಿಂದ ತಾಲೂಕಿನಲ್ಲಿ ಭಾರಿ ಮಳೆ ಆಗಿತ್ತು. ಆ ವೇಳೆಯಲ್ಲಿಯೇ ಮಳೆಗಾಲ ಪೂರ್ವ ಭಾವಿ ಕೆಲಸವನ್ನು ಏರಿಯಾ ಪ್ರಕಾರ ಮಾಡಬಹುದಿತ್ತು. ಆದರೂ ಪಟ್ಟಣ ಪಂಚಾಯತ್ ಇದರ ಬಗ್ಗೆ ಗಮನ ಹರಿಸಲಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.
ಪಟ್ಟಣದ ಮೂಡಗಣಪತಿ ದೇವಾಲಯದ ಕೆಳಗಿನ ಭಾಗದಿಂದ ಹೈವೆ ಸರ್ಕಲ್ ವರೆಗಿನ ಗಟಾರವನ್ನು ಸ್ವಚ್ಛ ಮಾಡಿಲ್ಲ. ಗಟಾರದಲ್ಲಿನ ಮಣ್ಣು, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಹಾಗೆ ತುಂಬಿಕೊಂಡಿರುವುದರಿಂದ ಮಳೆ ನೀರು ಗಟಾರ ಬಿಟ್ಟು ರಸ್ತೆಯ ಮೇಲೆ ಹರಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಐಆರ್‌ಬಿಯಿಂದ ಸಹ ನಡೆದಿಲ್ಲ ಸರಿಯಾದ ಕೆಲಸ:
ಇನ್ನು ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈಗ ಮಳೆಗಾಲ ಆರಂಭವಾಗಿರುವುದರಿಂದ ತಾಲೂಕಿನ ಹೃದಯಭಾಗದಲ್ಲಿರುವ ಶರಾವತಿ ಸರ್ಕಲ್ ನ ಸಮೀಪದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇದೇ ಶರಾವತಿ ಸರ್ಕಲ್ ಸಮೀಪದ ರಸ್ತೆಯಲ್ಲಿಯೂ ಮಳೆ ನೀರು ನಿಲ್ಲುತ್ತಿದ್ದು ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಕಷ್ಟವಾಗಿದೆ. ರಸ್ತೆಯ ಮೇಲೆ ನೀರು ನಿಲ್ಲುವುದರಿಂದ ವಾಹನಗಳು ಸಂಚರಿಸುವಾಗ ಮಳೆಯ ನೀರು ನಡೆದುಕೊಂಡು ಹೋಗುವವರ ಮೈಮೇಲೆ ರಾಚುತ್ತದೆ. ಹೀಗಾಗಿ ಪಾದಚಾರಿಗಳು ವಾಹನಸವಾರರಿಗೆ ಹಿಡಿಶಾಪವನ್ನು ಹಾಕುವಂತಾಗಿದೆ.ಪಟ್ಟಣ ಪಂಚಾಯತ್ ಅಧಿಕಾರಿಗಳು ತಾವು ಮಾಡುವ ಕೆಲಸವನ್ನು ಮರೆತಿದ್ದಾರೋ ಅಥವಾ ಮಾಡಿದರೂ ಸರಿ ಬಿಟ್ಟರೂ ಸರಿ ಎಂಬ ಧೋರಣೆಯೋ ತಿಳಿಯುತ್ತಿಲ್ಲ. ಐಆರ್ಬಿಯವರು ತಾವು ಮಾಡುವ ಕೆಲಸವನ್ನು ವೇಗವಾಗಿ ಮಾಡಿದ್ದರೆ ಮಳೆಗಾಲದ ಪೂರ್ವದಲ್ಲಿಯೇ ರಸ್ತೆ ಕಾಮಗಾರಿಯ ಕೆಲಸ ಮುಗಿಯುತ್ತಿತ್ತು ಎಂದು ಪಟ್ಟಣ ದ ಜನತೆ ಹೇಳಿಕೊಳ್ಳುತ್ತಿದ್ದಾರೆ.