ಜಿಲ್ಲೆಯಲ್ಲಿ ಮುಂದುವರಿದ ಮಳೆ: ಕೆಲವಡೆ ಹಾನಿ

KannadaprabhaNewsNetwork |  
Published : Aug 20, 2025, 01:30 AM IST
ಫೋಟೋ 19 ಎ, ಎನ್, ಪಿ 1 ಆನಂದಪುರ ಸಮೀಪದ  ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ಮಳೆಯಿಂದ   ಶೇಖರ ಎಂಬುವರ ಮನೆಯ ಗೋಡೆ ಕುಸಿದಿದೆ. | Kannada Prabha

ಸಾರಾಂಶ

ಜಿಲ್ಲಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ಮಂಗಳವಾರವೂ ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಇದರಿಂದ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾದ್ಯಂತ ಸೋಮವಾರ ಬೆಳಿಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ಮಂಗಳವಾರವೂ ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಇದರಿಂದ ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇದರ ಪರಿಣಾಮ ಲಿಂಗನಮಕ್ಕಿ ಆಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟುಗಳನ್ನೂ ತೆರೆದು 15 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಗಾಜನೂರಿನ ತುಂಗಾ ಜಲಾಶಯಕ್ಕೆ 75796 ಕ್ಯುಸೆಕ್ ಹರಿದು ಬಂದಿದ್ದು, ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ 76757 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ಹೊರ ಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ..

ಭದ್ರಾ ನದಿ ಪಾತ್ರದ ಕವಲುಗುಂದಿ ಏರಿಯಾದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ನಗರಸಭೆ ಆಡಳಿತ ತಿರುವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆದು, ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.

ಆನಂದಪುರ: ಮಳೆಯಿಂದ ಮೂರು ಮನೆಗಳಿಗೆ ಹಾನಿ.

ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಆನಂದಪುರದ ಮೂರು ಮನೆಗಳಿಗೆ ಹಾನಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ.

ಶನಿವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆನಂದಪುರ ಭೋವಿ ಕಾಲೋನಿಯ ಗೋಪಿ ಎಂಬುವರ ವಾಸದ ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿನ ಕಲಾವತಿ ಎಂಬುವರ ವಾಸದ ಮನೆ ಸಂಪೂರ್ಣ ಕುಸಿದು ಹೋಗಿದೆ. ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ಸುರಿದ ಮಳೆಯಿಂದ ಶೇಖರ ಎಂಬುವವರು ವಾಸದ ಮನೆಯ ಗೋಡೆ ಕುಸಿದು ಬಿದ್ದಿದ್ದು. ಉಳಿದ ಗೋಡೆಗಳು ಕುಸಿದು ಬೀಳುವ ಹಂತದಲ್ಲಿದ್ದು, ವಾಸವಾಗಿರುವ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು.

ಮಳೆಗೆ ಕುಸಿದು ಬಿದ್ದ ಶಾಲಾ ಕಟ್ಟಡ; ತಪ್ಪಿದ ಆನಾಹುತ

ರಿಪ್ಪನ್‍ಪೇಟೆ ಸಮೀಪದ ಅಡ್ಡೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದು ಹೋದ ಘಟನೆ ನಡೆದಿದೆ.

ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಗ್ರಾವದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ಶಾಲೆಯಲ್ಲಿ ಪ್ರಸ್ತುತ 17 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಭಾರಿ ಅಪಾಯದಿಂದ ಪಾರಾಗಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ