ಮುಂದುವರೆದ ಮಳೆ: ಬಾಸಾಪುರದಲ್ಲಿ ರಸ್ತೆ ಸಂಪರ್ಕ ಕಡಿತ

KannadaprabhaNewsNetwork |  
Published : Jul 17, 2024, 12:50 AM IST
೧೬ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಬಾಸಾಪುರದಿಂದ ಬೊಗಸೆ, ಶಿರವಾಸೆ ಹೋಗುವ ರಸ್ತೆಯು ಗುಂಡಿ ಬಿದ್ದು ಮುಖ್ಯರಸ್ತೆ ಮೇಲೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ.  | Kannada Prabha

ಸಾರಾಂಶ

ಬಾಳೆಹೊನ್ನೂರಿನ ಭದ್ರಾ ನದಿಯ ನೂತನ ಸೇತುವೆ ನಿರ್ಮಾಣದ ಕೆಲಸಕ್ಕೆ ತಂದಿದ್ದ ಜನರೇಟರ್ ನದಿಯ ನೀರಿನಲ್ಲಿ ಮುಳುಗಿರುವುದು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಯ ಅಬ್ಬರ ಮಂಗಳವಾರವೂ ಮುಂದುವರೆದಿದೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆಯ ಮುಂಭಾಗದ ಬಾಸಾಪುರ ರಸ್ತೆಯಿಂದ ಶಿರವಾಸೆ, ಬೊಗಸೆ-ಕಡವಂತಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಬಾರೀ ಮಳೆಗೆ ಬಿರುಕು ಬಿಟ್ಟು ಗುಂಡಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ.

ಬಾರೀ ಮಳೆಯಿಂದ ಅಧಿಕ ಪ್ರಮಾಣದ ನೀರು ಕೆರೆಯಿಂದ ಹೊರ ಹರಿದ ಪರಿಣಾಮ ರಸ್ತೆ ಗುಂಡಿ ಬಿದ್ದು ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಜನರು ಬಾಳೆಹೊನ್ನೂರು, ಚಿಕ್ಕಮಗಳೂರು, ಖಾಂಡ್ಯ, ಸಂಗಮೇಶ್ವರಪೇಟೆ, ಕಡಬಗೆರೆ ಮುಂತಾದ ಕಡೆಗಳಿಗೆ ತೆರಳಲು ಪರದಾಡುವಂತಾಗಿದೆ. ಮಂಗಳವಾರ ಪರ್ಯಾಯ ಮಾರ್ಗ ಬಳಸಿ ಸಂಚರಿಸಿದರು.

ಕಳಸ, ಕುದುರೆಮುಖ, ಬಾಳೆಹೊಳೆ, ಮಾಗುಂಡಿ ಸೇರಿದಂತೆ ಬಾಳೆಹೊನ್ನೂರು ಪಟ್ಟಣದಲ್ಲಿಯೂ ಮಳೆ ಅಧಿಕವಾಗಿ ಸುರಿದ ಪರಿಣಾಮ ಭದ್ರಾನದಿಯಲ್ಲಿ ನೀರು ಎರಡನೇ ದಿನವೂ ಅಪಾಯದಮಟ್ಟದಲ್ಲಿಯೇ ಹರಿಯುತ್ತಿದ್ದು, ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಸೇತುವೆ ಕಾಮಗಾರಿಗೆ ತಂದಿದ್ದ ಜನರೇಟರ್ ನದಿಯ ನೀರಿನಲ್ಲಿ ಮುಳುಗಡೆಗೊಂಡು ಹಾನಿಯಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಹಿಟಾಚಿ ಮೂಲಕ ನೀರಿನಲ್ಲಿ ಮುಳುಗಿದ್ದ ಜನರೇಟರ್‌ನ್ನು ಮೇಲಕ್ಕೆ ಎತ್ತಲಾಯಿತು.

ಪಟ್ಟಣದ ಭದ್ರಾ ನದಿಯ ದಡದಲ್ಲಿರುವ ಕೆಲವು ಅಡಕೆ, ಕಾಫಿ ತೋಟಗಳಿಗೆ ಭದ್ರಾನದಿಯ ನೀರು ನುಗ್ಗಿತ್ತು. ಕಳಸ, ಕೊಟ್ಟಿಗೆಹಾರ ರಸ್ತೆಯ ಬೈರೇಗುಡ್ಡ, ತೆಪ್ಪದಗುಂಡಿ, ಮಹಲ್‌ಗೋಡು ಮುಂತಾದ ಕಡೆಗಳಲ್ಲಿ ಭದ್ರಾನದಿಯ ನೀರು ಮುಖ್ಯರಸ್ತೆಯ ಸನಿಹಕ್ಕೆ ಬಂದು ಹರಿಯಲಾರಂಭಿಸಿತ್ತು.

ಬೈರೇಗುಡ್ಡದ ಹಿಂದೂ ರುದ್ರಭೂಮಿಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಕೆಲವು ಕಡೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ