ಕರಾವಳಿಯಲ್ಲಿ ಮುಂದುವರಿದ ಮಳೆ: ಇನ್ನೂ ಎರಡು ದಿನ ರೆಡ್‌ ಅಲರ್ಟ್

KannadaprabhaNewsNetwork |  
Published : Jun 18, 2025, 03:01 AM IST
ಭಾರಿ ಮಳೆಗೆ ಮಧುವಾಹಿನಿ ಹೊಳೆ ಉಕ್ಕಿ ಹರಿದು ಜಲಾವೃತಗೊಂಡ ಮಧೂರು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದ ಡ್ರೋನ್‌ ನೋಟ | Kannada Prabha

ಸಾರಾಂಶ

ಕರಾವಳಿಯಲ್ಲಿ ಮಂಗಳವಾರ ರೆಡ್‌ ಅಲರ್ಟ್‌ ಇದ್ದು, ಅಲ್ಲಲ್ಲಿ ಧಾರಕಾರ ಮಳೆ ಮುಂದುವರಿದಿತ್ತು. ಅಪರಾಹ್ನ ವೇಳೆಗೆ ನಿರಂತರ ಮಳೆ ಕಾಣಿಸಿದೆ. ಇದೇ ವೇಳೆ ಜೂ.18 ಮತ್ತು 19 ರಂದು ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಹೀಗಾಗಿ ಭಾರಿ ಮಳೆ ಮತ್ತೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಕರಾವಳಿಯಲ್ಲಿ ಮಂಗಳವಾರ ರೆಡ್‌ ಅಲರ್ಟ್‌ ಇದ್ದು, ಅಲ್ಲಲ್ಲಿ ಧಾರಕಾರ ಮಳೆ ಮುಂದುವರಿದಿತ್ತು. ಅಪರಾಹ್ನ ವೇಳೆಗೆ ನಿರಂತರ ಮಳೆ ಕಾಣಿಸಿದೆ. ಇದೇ ವೇಳೆ ಜೂ.18 ಮತ್ತು 19 ರಂದು ಕರಾವಳಿಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಹೀಗಾಗಿ ಭಾರಿ ಮಳೆ ಮತ್ತೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದ.ಕ. ಜಿಲ್ಲೆಯ ಸುಳ್ಯದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಅಲ್ಲಿ ಎಡೆಬಿಡದೆ ಮಳೆ ಸುರಿದಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಭಾರಿ ಮಳೆಗೆ ಜೆಪ್ಪು ಮಹಾಕಾಳಿ ಪಡ್ಪುವಿನ ರೈಲ್ವೆ ಅಂಡರ್‌ಪಾಸ್‌ ಹೂಳು ತುಂಬಿದ ಕೆರೆಯಂತಾಗಿದೆ.

ಅಲ್ಲಲ್ಲಿ ಗುಡ್ಡ ಕುಸಿತ, ಹಾನಿ:

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆ ಮೇಲೆಯೇ ಭಾರೀ ಗಾತ್ರದ ಕಾಂಕ್ರಿಟ್‌ ತಡೆಗೋಡೆ ಕುಸಿದ ಘಟನೆ ಮಂಗಳೂರಿನ ಕಣ್ಣೂರು ಬಳಿಯ ಕುಂಡಾಲಬೊಟ್ಟು ಎಂಬಲ್ಲಿ ನಡೆದಿದೆ. ತಡೆಗೋಡೆ ಕುಸಿತದಿಂದ ಎರಡು ಮನೆಗಳಿಗೆ ಕುಸಿಯುವ ಭೀತಿ ಉಂಟಾಗಿದೆ. ಮತ್ತಷ್ಟು ಮಣ್ಣು ಕುಸಿಯುತ್ತಿರುವ ಕಾರಣ ಯಾವುದೇ ಕ್ಷಣದಲ್ಲಿ ಮನೆ ಕುಸಿಯುವಲ ಭೀತಿ ಎದುರಾಗಿದೆ. ಕೆಳಗಿನ ಮತ್ತು ಮೇಲಿನ ನಾಲ್ಕೈದು ಮನೆಗಳಿಗೆ ಅಪಾಯ ಉಂಟಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಣ್ಣೂರಿನ ದಯಂಬುವಿನಲ್ಲಿ ಗುಡ್ಡ ಕುಸಿತದಲ್ಲಿ ಕೂದಲೆಲೆ ಅಂತರದಲ್ಲಿ ಕುಟುಂಬವೊಂದು ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ಕುಟುಂಬವೊಂದು ವಾಸವಿತ್ತು. ಜಲಪಾತದಂತೆ ನೀರು ಹರಿದ ಪರಿಣಾಮ ಮಣ್ಣು ಸಡಿಲಗೊಂಡು ಗುಡ್ಡ ಕುಸಿದಿತ್ತು. ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಳಗೆ‌ ಮಣ್ಣು, ನೀರು ಪ್ರವೇಶಿಸಿದೆ. ನೀರು ಹೊರಬರುತ್ತಲೇ ಮನೆಯಿಂದ ಓಡಿ ಕುಟುಂಬ ಜೀವ ಉಳಿಸಿಕೊಂಡಿದೆ.

ಭಾರೀ ಗುಡ್ಡ ಕುಸಿದು ಮನೆ ಮೇಲೆ ಬಿದ್ದಾಗ ಮನೆಯಿಂದ ಕಣ್ಣೂರಿನ ದಯಂಬು ಮೈಮೂನ ಕುಟುಂಬ ಹೊರಗಿದ್ದ ಕಾರಣ ಬಚಾವ್‌ ಆಗಿದೆ. ಮೈಮೂನ ಅವರು ಕೆಲವೇ ಗಂಟೆಗಳ ಮೊದಲು ಅಡುಗೆ ಮನೆ ಕೆಲಸ ಮುಗಿಸಿ ತೆರಳಿದ್ದರು. ಕೆಲವೇ ಗಂಟೆಗಳಲ್ಲಿ ಹೆಂಚಿನ ಮನೆಯ ಮೇಲೆ ಗುಡ್ಡ ಬಿದ್ದಿದೆ. ಭಾರೀ ಪ್ರಮಾಣದ ಮಣ್ಣಿನ ಜೊತೆ ರಭಸವಾಗಿ ಮಳೆ ನೀರು ಹರಿದಿದೆ. ಆಗ ಮಣ್ಣು ಬಿದ್ದ ಪರಿಣಾಮ ಅಡುಗೆ ಮನೆಯ ಗೋಡೆ, ಕಿಟಕಿ ಸೀಳಿ ಭಾರೀ ಅವಘಡ ಸಂಭವಿಸಿದೆ.

ಇಲ್ಲೇ ಸಮೀಪ ಇನ್ನೊಂದು ಮನೆಯವರು ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭ ಗುಡ್ಡ ಕುಸಿದು ಬಿದ್ದು ಭಾರಿ ಪ್ರಾಣಾಪಾಯದ ದುರಂತ ತಪ್ಪಿದೆ. ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಮನೆಯೊಳಗೆ ಹಳ್ಳದಂತೆ ಗುಡ್ಡದ ಕೆಸರು ನೀರು ಹರಿಯುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಮನೆಯ ಮೇಲ್ಛಾವಣಿ ಕುಸಿದು ಹೋಗಿದೆ. ಗುಡ್ಡದ ಕೆಲ ಭಾಗದಲ್ಲಿದೆ ಸುಮಾರು 50ಕ್ಕೂ ಹೆಚ್ಚು ಮನೆಗಳು ಇದ್ದು, ಸದ್ಯ ನಾಲ್ಕು ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮಧೂರು ದೇವಸ್ಥಾನ 2ನೇ ದಿನವೂ ಮುಳುಗಡೆ

ಗಡಿನಾಡು ಕಾಸರಗೋಡಿನ ಪ್ರಸಿದ್ಧ ಮಧೂರು ಶ್ರೀಸಿದ್ಧಿವಿನಾಯಕ ದೇವಸ್ಥಾನ ಭಾರಿ ಮಳೆಗೆ ಮುಳುಗಡೆಯಾಗಿದೆ. ಕಾಸರಗೋಡು ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಅವ್ಯಾಹತ ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗೆ ದೇವಸ್ಥಾನದ ಒಳಗೆ ಸಮೀಪದಲ್ಲೇ ಹರಿಯುವ ಮಧುವಾಹಿನಿ ಹೊಳೆ ನೀರು ಉಕ್ಕಿ ಹರಿದಿದ್ದು, ಮಂಗಳವಾರವೂ ಇಳಿಮುಖವಾಗಿಲ್ಲ. ನಿರಂತರ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ತುಂಬಿ ಹರಿಯುತ್ತಿದೆ. ಸುತ್ತಮುತ್ತಲ ಪ್ರದೇಶಗಳು ನೆರೆ ನೀರಿನಿಂದ ಆವೃತ್ತವಾಗಿವೆ. ಪ್ರವಾಹ ನೀರು ಪ್ರವೇಶಿಸಿದ ಕಾರಣ ಇಲ್ಲಿ ನಿತ್ಯ ಪೂಜೆಗೆ ಅಡ್ಡಿ ಉಂಟಾಗಿದೆ. ಧೃಢ ಕಲಶದ ಮಾರನೇ ದಿನ ಮೇ 30ರಂದು ಭಾರಿ ಮಳೆಗೆ ಮಧೂರು ದೇವಸ್ಥಾನ ಜಲಾವೃತವಾಗಿತ್ತು. ಇದೇ ವರ್ಷದಲ್ಲಿ ಇದು ಎರಡನೇ ಬಾರಿ ಜಲಾವೃತಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ