ಔಷಧಿ ಆಗರ ನೇರಳೆ ಹಣ್ಣಿಗೆ ಭರ್ಜರಿ ಬೇಡಿಕೆ

KannadaprabhaNewsNetwork |  
Published : Jun 18, 2025, 02:59 AM ISTUpdated : Jun 18, 2025, 01:31 PM IST
ಪೊಟೋ- ಲಕ್ಷ್ಮೇಶ್ವರ ಪಟ್ಟಣದಲ್ಲಿ ನೇರಳೆ ಹಣ್ಣು ಮಾರಾಟ ಮಾಡುತ್ತಿರುವ ಹನಮಂತಪ್ಪ ರಾಮಗೇರಿ | Kannada Prabha

ಸಾರಾಂಶ

ನೇರಳೆ ಹಣ್ಣು ಈಗ ಇಲ್ಲಿಯ ಪೇಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ಆದಾಯ ತಂದುಕೊಡುತ್ತಿದೆ.

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ನೇರಳೆ ಹಣ್ಣು ಈಗ ಇಲ್ಲಿಯ ಪೇಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ಆದಾಯ ತಂದುಕೊಡುತ್ತಿದೆ.

ಮಾರುಕಟ್ಟೆಯಲ್ಲಿ ಕಿಲೋಕ್ಕೆ 200 ₹ ಗಳಿಗೆ ಮಾರಾಟವಾಗುತ್ತಿದೆ. ಹೃದಯ ಸಂಬಂಧಿ ರೋಗಗಳಿಗೆ ಹಾಗೂ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುವ ಔಷಧಿಯ ಗುಣ. ರಕ್ತ ಶುದ್ಧೀಕರಣ ಗುಣ ನೇರಳೆ ಹಣ್ಣಿನಲ್ಲಿ ಇರುವುದರಿಂದ ಸಕ್ಕರೆ ಕಾಯಿಲೆ ಇರುವ ರೋಗಿಗಳು ಸಹಜವಾಗಿ ನೇರಳೆ ಹಣ್ಣಿನ ಖರೀದಿಗೆ ಮುಂದಾಗುತ್ತಿರುವುದರಿಂದ ಹೆಚ್ಚಿನ ಬೆಲೆ ಸಿಗುತ್ತಿದೆ.

ನೇರಳೆ ಹಣ್ಣು ಕಿತ್ತು ತಂದು ಮಾರಾಟ ಮಾಡುವಲ್ಲಿ ಸಾಕಷ್ಟು ತೊಂದರೆ ಇರುತ್ತವೆ. ಗಿಡಗಳು ಅಷ್ಟು ಗಟ್ಟಿಯಾದ ಮರಗಳಾಗಿರುವುದಿಲ್ಲ, ಹೀಗಾಗಿ ಮರದಿಂದ ಹಣ್ಣು ಕೀಳುವುದು ಸಾಹಸದ ಕೆಲಸವಾಗಿದೆ. ಕಿತ್ತ ಹಣ್ಣು ಹಾಳಾಗದಂತೆ ನೋಡಿಕೊಳ್ಳುವುದು ಹಾಗೂ ನೆಲಕ್ಕೆ ಬೀಳದಂತೆ ತಡೆದು ಗುಣಮಟ್ಟದ ಹಣ್ಣು ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯ ಶ್ರಮದಿಂದ ಕೂಡಿದೆ ಎನ್ನುತ್ತಾರೆ ನೇರಳೆ ಹಣ್ಣಿನ ವ್ಯಾಪಾರಿ ಹನಮಂತಪ್ಪ ರಾಮಗೇರಿ.

ನೇರಳೆ ಹಣ್ಣಿನ ಉಪಯೋಗಗಳು:  ನೇರಳೆ ಹಣ್ಣಿನಲ್ಲಿ ಸತು ಹಾಗೂ ವಿಟಮಿನ್ ಸಿ ಅಂಶ ಇರುವುದರಿಂದ ಮಧುಮೇಹಕ್ಕೆ ರಾಮಬಾಣವಾಗಿದೆ. ಕೆಮ್ಮು ಉಸಿರಾಟದ ತೊಂದರೆ ನಿವಾರಿಸುವಲ್ಲಿ ಈ ಹಣ್ಣು ಹೆಚ್ಚು ಸಕ್ರಿಯವಾಗಿದೆ. ಹಣ್ಣು ಹಾಗೂ ಬೀಜಗಳಲ್ಲಿ ಹೇರಳ ಪೋಷಕಾಂಶಗಳು ಇವೆ. ಪೈಬರ್, ಕ್ಯಾಲ್ಸಿಯಂ, ಮೇಗ್ನೇಶಿಯಂ, ಪೊಟ್ಯಾಶಿಯಂ, ವಿಟಾಮಿನ್ -ಸಿ, ಇ, ಜಾಂಬೋಲಿಯನ್, ಪ್ಲೇವನಾಯ್ಸ್‌ಗಳ ಆಗರವಾಗಿದೆ. 

ಗಿಡದ ಎಲೆ, ತೊಗಟಿಯನ್ನು ಅತಿಸಾರ, ಬೇಧಿ, ಬಾಯಿ ಹುಣ್ಣು ಹಾಗೂ ಗಾಯಕ್ಕೆ ಇದನ್ನು ಬಳಸುತ್ತಾರೆ. ಇದರ ಬೀಜವನ್ನು ಸ್ತ್ರೀ ರೋಗಗಳ ಔಷಧಿಗೆ ಬಳಸುತ್ತಾರೆ. ಬೀಜದ ಚೂರ್ಣವನ್ನು ಮಧುಮೇಹ ರೋಗದ ನಿವಾರಣೆಗೆ ಬಳಸುತ್ತಾರೆ. ಇದರ ಎಲೆಯನ್ನು ವಾಂತಿ ನಿವಾರಕ ಕಷಾಯವನ್ನಾಗಿ ಬಳಸುತ್ತಾರೆ. ನೇರಳೆ ಹಣ್ಣು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಮೂಲಕ ಮಧುಮೇಹ ರೋಗದ ನಿಯಂತ್ರಣ ಮಾಡುವ ಸಾಧನವಾಗಿದೆ ಎಂದು ಡಾ. ಡಾ. ಎಸ್.ಸಿ. ಮಲ್ಲಾಡ ಹೇಳಿದರು.

ನೇರಳೆ ಹಣ್ಣಿನ ವೈಜ್ಞಾನಿಕ ಹೆಸರು: ನೇರಳೆ ಹಣ್ಣಿನ ಮರವನ್ನು ಜಂಬು ನೇರಳೆ ಅಥವಾ ಬ್ಲ್ಯಾಕ್ ಪ್ಲಮ್ ಎಂದೂ ಕರೆಯುತ್ತಾರೆ. ಹಣ್ಣಿನ ವೈಜ್ಞಾನಿಕ ಹೆಸರು ಸೈಜೇಜಿಯಂ ಜಂಬೋಲಾನಂ ಎಂದು ಕರೆಯುತ್ತಾರೆ. ನೇರಳೆ ಮರಗಳು ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಂಡು ಬರುತ್ತವೆ. 

ಭಾರತ, ಪಾಕಿಸ್ತಾನ, ಇಂಡೋನೇಷಿಯಾ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿ ಕಂಡು ಬರುತ್ತವೆ. ಮಾರ್ಚ್‌, ಏಪ್ರಿಲ್ ತಿಂಗಳಲ್ಲಿ ಹೂವು ಬಿಡುತ್ತವೆ ಮತ್ತು ಜೂನ್ ತಿಂಗಳಲ್ಲಿ ಹಣ್ಣು ಬಿಡುವ ಪರ್ವಕಾಲವಾಗಿದೆ. ಸುಮಾರು 8-10 ವರ್ಷಗಳ ಬೆಳೆದ ನೇರಳೆ ಹಣ್ಣಿನ ಮರವು ಉತ್ತಮ ಹಣ್ಣು ಕೊಡುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಸುರೇಶ ಕುಂಬಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ