ಗಂಗಾಧರ ಕೊಳಗಿ
ಯಾವುದೇ ಬೃಹತ್ ಯೋಜನೆಯಿಂದ ತೊಂದರೆಗೊಳಗಾಗದೆ ನೈಸರ್ಗಿಕ ಹರಿವನ್ನು ಉಳಿಸಿಕೊಂಡ ಅಘನಾಶಿನಿ ನದಿಗೆ ಆಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಯೋಜನೆ ಹತ್ತಾರು ದಶಕಗಳ ಹಿಂದೆ ಬಂತು. ಎರಡೂವರೆ ದಶಕಗಳ ಹಿಂದೆ ಅದನ್ನು ಕಾರ್ಯಗತಗೊಳಿಸಲು ಮುಂದಾದಾಗ ಸಿದ್ದಾಪುರ ತಾಲೂಕಿನ ಜನತೆಯ ಜೊತೆಯಲ್ಲಿ ಗಟ್ಟಿಯಾಗಿ ನಿಂತ ಆಗಿನ ಶಾಸಕ ಗೋಪಾಲ ಕಾನಡೆ, ಪರಿಸರ ಪ್ರೇಮಿಗಳ ಬೃಹತ್ ಪ್ರತಿರೋಧದ ಮೂಲಕ ತಡೆದದ್ದು ಇತಿಹಾಸ. ಈಗ ಅದೇ ನದಿಗೆ ಯೋಜನೆಯನ್ನು ಬದಲಾಯಿಸಿ ಕುಡಿಯುವ ನೀರಿನ ಪೂರೈಕೆ ಎನ್ನುವ ಮಾನವೀಯ ಅನುಕಂಪದ ಹೆಸರಿನಲ್ಲಿ ನದಿ ಜೋಡಣೆ ಯೋಜನೆ ರೂಪುರೇಷೆ ಸಿದ್ಧಗೊಳಿಸಲಾಗಿದೆ.
ಸಿದ್ದಾಪುರ ತಾಲೂಕಿನ ಗೋಳಿಮಕ್ಕಿ– ಬಾಳೆಕೊಪ್ಪ ಸಮೀಪದ ಆಣೆಕಟ್ಟಿನಿಂದ 4 ಮೀ. ವ್ಯಾಸದ 38 ಪೈಪ್ ಗಳ ಮೂಲಕ ಸುರಂಗ ಹಾಗೂ ಪೈಪ್ ಲೈನ್ ಮೂಲಕ ಸುಮಾರು 194 ಕಿಮೀ. ದೂರದ ಚಿತ್ರದುರ್ಗದ ವಾಣಿವಿಲಾಸಸಾಗರ ಜಲಾಶಯಕ್ಕೆ ನೀರನ್ನು ಕೊಂಡ್ಯೊಯ್ಯುವ ಯೋಜನೆ ಇದಾಗಿದ್ದು ಈ ಯೋಜನೆಗೆ ₹23,56,63,89 ವೆಚ್ಚ ಅಂದಾಜಿಸಲಾಗಿದೆ.ಈ ಆಣೆಕಟ್ಟು ನಿರ್ಮಾಣದಿಂದ ಮುಕ್ಕಾಲುಭಾಗ ಸಿದ್ದಾಪುರ ತಾಲೂಕಿನ ಲಕ್ಷಾಂತರ ಎಕರೆ ಕೃಷಿಭೂಮಿ, ಅರಣ್ಯಕ್ಷೇತ್ರ ನೀರಿನಲ್ಲಿ ಮುಳುಗಡೆಯಾಗಲಿದೆ. ಪ್ರಸಕ್ತ ಕರಾವಳಿ ಭಾಗದ ಕುಮಟಾ, ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದ್ದು, ಅದಕ್ಕೆ ಕೊರತೆ ಎದುರಾಗಲಿದೆ. ಕರಾವಳಿಯಲ್ಲಿನ ಮತ್ಸೋದ್ಯಮಕ್ಕೆ ಆಘಾತ ಎದುರಾಗುವದರ ಜೊತೆಗೆ ನೀರಿನ ಕೊರತೆಯಿಂದ ಸಮುದ್ರದ ಉಪ್ಪುನೀರು ನುಗ್ಗಿ ನದಿಪಾತ್ರದ ಕೃಷಿ ಕಾರ್ಯಗಳಿಗೆ ಕಂಟಕ ಎದುರಾಗುವದು ನಿಶ್ಚಿತ. ಮನೆ, ಆಸ್ತಿ ಕಳೆದುಕೊಂಡವರಿಗೆ ಪುನರ್ವಸತಿ, ಪರಿಹಾರ ದೊರೆಯುದೂ ಅನಿಶ್ಚಿತ. ಹೀಗಾಗಿ, ನದಿಪಾತ್ರದುದ್ದಕ್ಕು ಹೋರಾಟದ ಕಹಳೆ ಮೊಳಗಿದೆ.
ಸಂಸದ ವಿಶ್ವೇಶ್ವರ ಹೆಗಡೆ, ಶಾಸಕ ಭೀಮಣ್ಣ ನಾಯ್ಕಯೋಜನೆಯ ವಿರುದ್ಧ ತಮ್ಮತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗೂ ಯೋಜನೆ ಸ್ಥಗಿತಗೊಳಿಸಲು ಮನವಿ ನೀಡಿದ್ದಲ್ಲದೇ, ನಿಯೋಗದಲ್ಲಿ ದೆಹಲಿಗೆ ತೆರಳಿ ಕೇಂದ್ರ ಮಂತ್ರಿಗಳಿಗೂ ಯೋಜನೆಯ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಿದ್ದಾರೆ.ನಿರಂತರ ಹೋರಾಟ
ಜಿಲ್ಲೆಯ ಜನತೆ, ಪರಿಸರಕ್ಕೆ ಮಾರಕವಾದ ಈ ಯೋಜನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತೇವೆ. ಯಾವುದೆ ಕಾರಣಕ್ಕೂ ಯೋಜನೆ ಜಾರಿಗೆ ಬಿಡುವುದಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ರವೀಂದ್ರ ನಾಯ್ಕ ಹೇಳಿದ್ದಾರೆ.