ಕನ್ನಡಪ್ರಭವಾರ್ತೆ ತಿಪಟೂರು
ಪಶು ದೇಶದ ಸಂಪತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ, ಹಾಲು ಒಕ್ಕೂಟದ ಸಹಯೋಗದೊಂದಿಗೆ ಪಶು ಸಂಪತ್ತು ಉಳಿಸಿಕೊಳ್ಳಲು ಕಾಲುಬಾಯಿ ಜ್ವರದಿಂದ ಬರುತ್ತಿರುವ ರಾಸುಗಳಿಗೆ ರೋಗ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ನಿರಂತರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ತಾಲೂಕಿನ ಮಾದಿಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಮತ್ತು ಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ 8ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಹಸುವಿಗೆ ಕಾಲುಬಾಯಿ ಜ್ವರ ಬಂದರೆ ಬೇವಿನ ರಸ ಹಚ್ಚುತ್ತಿದ್ದರು. ಬಹಳಷ್ಟು ರಾಸುಗಳು ಅಸುನೀಗಿ ರೈತನಿಗೆ ಬಹಳಷ್ಟು ನಷ್ಟ ಉಂಟಾಗುತ್ತಿತ್ತು. ಈಗ ನಿರಂತರವಾಗಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಶೇ.90ರಷ್ಟು ರೋಗ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.ಸರ್ಕಾರಗಳ ನಿರಂತರ ಪ್ರೋತ್ಸಾಹದಿಂದ ಕ್ಷೀರಕ್ರಾಂತಿಯಾಗಿದ್ದು ಒಂದು ಲಕ್ಷ ನಲವತ್ತು ಸಾವಿರ ಲೀಟರ್ ಹಾಲು ತಿಪಟೂರು ತಾಲೂಕು ಒಂದರಲ್ಲೇ ಉತ್ಪಾದನೆಯಾಗುತ್ತಿದೆ. ಈಗ ಸರ್ಕಾರ ಒಂದು ಲೀಟರ್ ಹಾಲಿಗೆ ಐದು ರುಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಕೆಎಂಎಫ್ ವತಿಯಿಂದ ಸಾಕಷ್ಟು ಪ್ರೋತ್ಸಾಹ ಕ್ಷೀರೋದ್ಯಮಕ್ಕೆ ದೊರೆಯುತ್ತಿದೆ. ರೈತರ ಮಕ್ಕಳಿಗೆ ವಿದ್ಯಾಬ್ಯಾಸ ಸೌಲಭ್ಯ ನೀಡುತ್ತಿದೆ. ಹಸು ಮರಣ ಹೊಂದಿದರೂ 15ಸಾವಿರ ರು. ಪರಿಹಾರ ದೊರೆಯುತ್ತಿದೆ. ಮನೆಯಲ್ಲಿ 4-5 ಹಸುಗಳಿದ್ದರೆ ಯಾವುದೇ ಐಟಿ-ಬಿಟಿ ಉದ್ಯೋಗಿಗೆ ಕಡಿಮೆ ಇಲ್ಲದಂತೆ ಜೀವನ ನಡೆಸಬಹುದಾಗಿದೆ ಎಂದರು.ಕೆಎಂಎಫ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ ಮಕ್ಕಳಿಗೆ ಪೋಲಿಯೋ ಬರುವ ರೀತಿ ರಾಸುಗಳಿಗೆ ಕಾಲುಬಾಯಿ ರೋಗ ಬರುತ್ತಿದೆ. ದೇಶದಿಂದ ಪೋಲಿಯೋ ನಿರ್ಮೂಲನೆ ಮಾಡಿದ ಹಾಗೆ ಈ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ದರಿಸಿದ್ದು ಹಾಲು ಒಕ್ಕೂಟದ ಸಹಯೋಗದೊಂದಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ತಾಲೂಕಿನಲ್ಲಿ 50ಸಾವಿರ ರಾಸುಗಳಿಗೆ ಈಗಾಗಲೇ 7ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಮುಗಿದಿದ್ದು ಈಗ 8ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇನ್ನು ಎರಡು ಸುತ್ತಿನಲ್ಲಿ ಈ ರೋಗ ಸಂಪೂರ್ಣವಾಗಿ ಹತೋಟಿಗೆ ಬರಲಿದೆ ಎಂದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ನಂದೀಶ್ ಮಾತನಾಡಿ 8ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಒಂದು ತಿಂಗಳ ಕಾಲ ತಾಲೂಕಿನಾದ್ಯಂತ ನಡೆಯಲಿದೆ. 34ಜನರ ವ್ಯಾಕ್ಸಿನೇಷನ್ ತಂಡ ರಚಿಸಲಾಗಿದೆ. 12 ಜನ ವೈದ್ಯರನ್ನು ತಂಡವನ್ನಾಗಿ ನೇಮಿಸಲಾಗಿದೆ. ವ್ಯಾಕ್ಸಿನ್, ಸಿರಿಂಜ್, ಜೆಲ್, ಎಮರ್ಜನ್ಸಿ ಔಷಧ ಎಲ್ಲ ಸಿದ್ದತೆಗಳನ್ನೂ ಮಾಡಲಾಗಿದೆ. ತಾಲೂಕಿನಲ್ಲಿ ಇರುವ ಎಲ್ಲ ೪೮ಸಾವಿರ ರಾಸುಗಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮಾದಿಹಳ್ಳಿ ಹಾಲು ಉತ್ಪಾದನಾ ಸಂಘದ ಅಧ್ಯಕ್ಷ ಸಿದ್ದರಾಮಣ್ಣ, ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.