ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಟೆಂಡರ್ ಕಾಮಗಾರಿಗಳನ್ನು ಪ್ಯಾಕೇಜ್ ಪದ್ಧತಿಯಡಿ ಕರೆಯುವುದನ್ನು ಹಾಗೂ ಭೂ ಸೇನಾ ನಿಗಮಕ್ಕೆ ಕಾಮಗಾರಿ ವಹಿಸುವುದನ್ನು ಕೈಬಿಡಬೇಕು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೇಗಜಿ ಒತ್ತಾಯಿಸಿದರು.ನಗರದಲ್ಲಿ ಯಾತ್ರಿಕ ನಿವಾಸ್ ಹೋಟೆಲ್‌ನಲ್ಲಿ ಜರುಗಿದ ಗುತ್ತಿಗೆದಾರರ ಸಂಘದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳು ಬರುತ್ತವೆ. ಅವುಗಳ ಅಡಿಯಲ್ಲಿ ಬರುವ ಕಾಮಗಾರಿಗಳಿಗೆ ಪ್ಯಾಕೇಜ್ ಪದ್ಧತಿ ಮಾಡಬಾರದು ಎಂದು ಉಚ್ಛ ನ್ಯಾಯಾಲಯದ ಆದೇಶವಿದ್ದರೂ ಸಹ ಆದೇಶ ಉಲ್ಲಂಘಿಸಿ ಎಲ್ಲ ಅಧಿಕಾರಿಗಳು ಟೆಂಡರ್ ಕರೆಯುತ್ತಿದ್ದಾರೆ ಎಂದು ದೂರಿದರು.
ಉಳಿದ ಕಾಮಗಾರಿ ಟೆಂಡರ್ ಕರೆಯದೇ ನೇರವಾಗಿ ಕೆಆರ್‌ಐಡಿಎಲ್ (ಭೂಸೇನಾ ನಿಗಮ)ಕ್ಕೆ ವಹಿಸಿದ್ದಾರೆ. ಹೀಗಾದರೆ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಜಾರಿಯಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರದೇ ಅನ್ಯಾಯ ಮಾಡಲಾಗುತ್ತಿದೆ. ಅದೇ ರೀತಿ ಗುತ್ತಿಗೆದಾರರ ಯಂತ್ರೋಪಕರಣಗಳು, ಕೂಲಿ ಕಾರ್ಮಿಕರು ಕೆಲಸವಿಲ್ಲದಂತಾಗಿ ಬೀದಿ ಪಾಲಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಈ ಹಿಂದೆ ನಿರ್ವಹಿಸಿದ ಕಾಮಗಾರಿಗಳ ಬಿಲ್ ಸಹ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ಎಲ್ಲ ತಪ್ಪು ಸರಿಪಡಿಸುವ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಸಂತೋಷದ ಸಂಗತಿ. ಆದಾಗ್ಯೂ, ಆ ಭರವಸೆ ಇನ್ನೂ ಇತ್ಯರ್ಥವಾಗಿಲ್ಲ ಎಂದು ದೂರಿದರು.
ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಈಡೇರಿಸಬೇಕು. ಕೂಡಲೇ ಮಧ್ಯಸ್ಥಿಕೆ ವಹಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ಯಾಕೇಜ್ ಪದ್ಧತಿ ಟೆಂಡರ್ ಕಾಮಗಾರಿ ಹಾಗೂ ಭೂಸೇನಾ ನಿಗಮಕ್ಕೆ ವಹಿಸುವ ಕಾಮಗಾರಿ ತಡೆಯಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಎನ್.ಎಸ್. ಮೂಲಗೆ, ಮೊಹಸಿನ್ ಎಂ. ಪಟೇಲ್, ಸಂಜಯ್ ಆರ್.ಕೆ., ಎಂ.ಕೆ. ಪಾಟೀಲ್, ರಾಜಶೇಖರ್ ಯಂಕಂಚಿ, ರಿಯಾಜುದ್ದೀನ್ ಪಟೇಲ್ ಮುಂತಾದವರು ಪಾಲ್ಗೊಂಡಿದ್ದರು.