ಸಣ್ಣ ವಿಷಯ ದೊಡ್ಡದು ಮಾಡದೇ ಅಭಿವೃದ್ಧಿಗೆ ಸಹಕರಿಸಿ: ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

KannadaprabhaNewsNetwork | Published : Mar 1, 2025 1:02 AM

ಸಾರಾಂಶ

ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಅಭಿವೃದ್ಧಿಯತ್ತ ಗಮನ ಕೊಡೋಣ. ನನ್ನ ಅವಧಿಯಲ್ಲಿ ಅನುದಾನ ತರಲು ಸಿದ್ಧನಿದ್ದೇನೆ ಎಂದು ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.

ಹಾವೇರಿ: ಹಾವೇರಿ ಜಿಲ್ಲಾ ಕೇಂದ್ರವಾಗಿ 27 ವರ್ಷ ಆದರೂ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಸಾಕಷ್ಟು ಕೆಲಸಗಳು ನನೆಗುದಿಗೆ ಬಿದ್ದಿವೆ. ನಾನು ಈ ಅವಧಿಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕನಸು ಇಟ್ಟುಕೊಂಡಿದ್ದೇನೆ. ಉಪಸಭಾಧ್ಯಕ್ಷ ಇರೋದ್ರಿಂದ ಎಲ್ಲ ಸಚಿವರು ನನ್ನ ಮಾತು ಕೇಳ್ತಾರೆ. ಇನ್ನೂ ಮೂರು ವರ್ಷ ಕಾಲಾವಕಾಶ ಇದೆ. ಎಷ್ಟು ಸಾಧ್ಯವೋ ಅಷ್ಟು ಅನುದಾನ ತರುತ್ತೇನೆ. ನೀವು ಸಣ್ಣಪುಟ್ಟ ವಿಷಯಗಳನ್ನೇ ದೊಡ್ಡದು ಮಾಡೋದು ಬಿಟ್ಟು, ಊರ ಅಭಿವೃದ್ಧಿಗೆ ಶ್ರಮಿಸಿ ಎಂದು ಶಾಸಕ ರುದ್ರಪ್ಪ ಲಮಾಣಿ ಅವರು ನಗರಸಭೆ ಸದಸ್ಯರಿಗೆ ಕಿವಿಮಾತು ಹೇಳಿದರು.ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದರು.ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಅಭಿವೃದ್ಧಿಯತ್ತ ಗಮನ ಕೊಡೋಣ. ನನ್ನ ಅವಧಿಯಲ್ಲಿ ಅನುದಾನ ತರಲು ಸಿದ್ಧನಿದ್ದೇನೆ. ಎರಡನೇ ಹಂತದ ಕುಡಿಯುವ ನೀರು ಯೋಜನೆ ಆರಂಭಿಸಬೇಕಿದೆ. ಈಗ ಹೆಗ್ಗೇರಿ ಕೆರೆ ತುಂಬಿದೆ. ಮುಲ್ಲಾನಕೆರಿ, ಅಕ್ಕಮಹಾದೇವಿ ಹೊಂಡ, ದುಂಡಿಬಸವೇಶ್ವರ ಕೆರೆಗೆ ನೀರು ಬಂದಿದ್ದು, ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಈ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಗಟಾರದ ನೀರು ಹೊರಗಡೆ ಹಾಕಬೇಕಿದೆ. ವಾರ್ಕಿಂಗ್ ಪಾತ್‌ ನಿರ್ಮಿಸಬೇಕಿದೆ ಎಂದರು.ದುಂಡಿಬಸವೇಶ್ವರ ಕೆರೆಯ ಸುತ್ತಲೂ ಮನೆ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ನಾಗೇಂದ್ರನಮಟ್ಟಿಯಲ್ಲಿ ಮನೆ ಹಂಚಿಕೆ ಮಾಡುವ ಪ್ರಕ್ರಿಯೆ ನಡೆದಿದೆ. ನಾಗೇಂದ್ರಮಟ್ಟಿನಮಟ್ಟಿ ನಿರ್ಮಿಸಿರುವ ಮನೆಗಳಿಗೆ ಫಲಾನುಭವಿಗಳಿಂದ ₹1 ಲಕ್ಷ ವಂತಿಕೆ ಪಡೆದು ಹಂಚಿಕೆ ಮಾಡಲಾಗುವುದು. ಇನ್ನೂ ಎಷ್ಟು ಬೇಕಾದರೂ ಮನೆ ನಿರ್ಮಿಸಲು ಸಿದ್ಧರಿಸಿದ್ದೇವೆ. ನಗರದ ಎಲ್ಲ ನಿವಾಸಿಗಳು ಸ್ವಂತ ಸೂರು ಕಲ್ಪಿಸುವ ಕನಸು ಕಂಡಿದ್ದೇನೆ ಎಂದರು.

ನಗರದ ಜನತೆಗೆ ಶುದ್ಧ ಕುಡಿಯುವ ನೀರು, ಯುಜಿಡಿ ಕೆಲಸಗಳನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದೇನೆ. ನಗರದ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ವೃತ್ತದಿಂದ ಆರ್‌ಟಿಒ ಕಚೇರಿವರೆಗೆ ₹85 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನತೆಗೆ ಬಿ ಖಾತೆ ನೀಡಲು ಕಾರ್ಯಕ್ರಮವನ್ನು ಅಭಿಯಾನದ ರೂಪದಲ್ಲಿ ಮಾಡಿ, ಇದರಿಂದ ಮುಂದಿನ ಸಾರಿ ₹50 ಲಕ್ಷ ಉಳಿತಾಯ ಬಜೆಟ್ ಮಂಡಿಸಬಹುದು. ಅಕ್ಕಮಹಾದೇವಿ ಹೊಂಡದಲ್ಲಿ ಅಕ್ಕಮಹಾದೇವಿ ಪುತ್ಥಳಿ, ಬಸವಣ್ಣನವರ ಪುತ್ಥಳಿ, ಕಿತ್ತೂರುರಾಣಿ ಚನ್ನಮ್ಮ ವೃತ್ತದ ಅಭಿವೃದ್ಧಿ ಪಡಿಸಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರದಿಂದಲೂ ಹಾವೇರಿ ನಗರದ ಅಭಿವೃದ್ಧಿಗೆ ಅನುದಾನ ಕೊಡಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಿದ್ದೇನೆ ಎಂದರು.ಹಾವೇರಿ ವಿವಿ ಉಳಿಸಿಕೊಳ್ಳಲು ಚರ್ಚೆ:ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಬೇಕು ಎಂಬ ಕೂಗು ಇದೆ. ಈ ನಿಟ್ಟಿನಲ್ಲಿ ನಗರಸಭೆಯಿಂದಲೂ ಒಂದು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಿದರೆ ಒಳ್ಳೆಯದಾಗುತ್ತೆ ಎಂದರು.ಆಗ ಶಾಸಕ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ, ನೂತನ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸಬೇಕು ಎಂದು ಉಪಸಮಿತಿಯಲ್ಲಿ ಚರ್ಚೆ ಆಗಿದೆ. ಇದು ನಾನಿರುವ ಅರ್ಜಿಗಳ ಸಮಿತಿ ಸಭೆಗೂ ಬಂದಿತ್ತು. ನಾನು ಹಾವೇರಿ ವಿಶ್ವವಿದ್ಯಾಲಯ ಇರಬೇಕು ಎಂದು ಸಭೆಯಲ್ಲಿ ಹೇಳಿದ್ದೇನೆ. ಈ ಕುರಿತು ಅಧಿವೇಶನದಲ್ಲೂ ಚರ್ಚೆಗೆ ಬರುತ್ತದೆ. ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ ಚನ್ನಪ್ಪ ಇತರರಿದ್ದರು.

Share this article