ಆರ್ಥಿಕ ಕ್ಷೇತ್ರಕ್ಕೆ ಸಹಕಾರಿ ಸಂಸ್ಥೆ ಕೊಡುಗೆ ಅಪಾರ: ಯದುವೀರ್‌

KannadaprabhaNewsNetwork |  
Published : Jan 14, 2026, 04:00 AM IST
ಚಿತ್ರ :  11ಎಂಡಿಕೆ1 :  ಶತಮಾನೋತ್ಸವ ಸಮಾರಂಭವನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಮತ್ತು ಆರ್ಥಿಕ ಕ್ಷೇತ್ರ ಬಲಗೊಳ್ಳಲು ಸಹಕಾರಿ ಸಂಸ್ಥೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಸಹಕಾರಿ ಎಂದು ಮೈಸೂರು, ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಲು ಮತ್ತು ಆರ್ಥಿಕ ಕ್ಷೇತ್ರ ಬಲಗೊಳ್ಳಲು ಸಹಕಾರಿ ಸಂಸ್ಥೆಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿ ಸಹಕಾರಿ ಎಂದು ಮೈಸೂರು, ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದರು.

ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ‘ಶತಸಂಭ್ರಮ’ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಅರ್ಥಿಕ ಬಲ ಮುಖ್ಯವಾಗುತ್ತದೆ, ಸಹಕಾರಿ ಸಂಸ್ಥೆಗಳು ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತಾ ಬಂದಿವೆ. ಇಂದಿನ ಆಧುನಿಕ ಕಾಲದಲ್ಲೂ ಕೊಡಗಿನ ಸಹಕಾರಿ ಕ್ಷೇತ್ರ ಇತರರಿಗೆ ಮಾದರಿಯಾಗಿದೆ, ಇಲ್ಲಿನ ಸಹಕಾರಿಗಳಿಂದ ಕಲಿಯುವುದು ಬಹಳಷ್ಟಿದೆ ಎಂದರು.

2025ರಲ್ಲಿ ಕೇಂದ್ರ ಸರಕಾರ ನೂತನ ಸಹಕಾರಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ಪ್ರಥಮ ಬಾರಿಗೆ ಸಹಕಾರ ಖಾತೆಯನ್ನು ರಚಿಸಿ ಗೃಹ ಸಚಿವ ಅಮಿತ್ ಶಾ ಅವರೇ ಸಹಕಾರ ಸಚಿವರಾಗಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದ್ದಾರೆ. ಈಗಾಗಲೇ 17 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದ್ದು, 2029 ರ ವೇಳೆಗೆ 2 ಲಕ್ಷ ಸಂಘಗಳು ಡಿಜಿಟಲೀಕರಣಗೊಳ್ಳಲಿವೆ. ಎಂದು ಯದುವೀರ್ ಒಡೆಯರ್ ಹೇಳಿದರು.

ಹಿರಿಯ 100 ಸಹಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಹಿರಿಯರನ್ನು ಸ್ಮರಿಸುವ ಮತ್ತು ಗೌರವಿಸುವ ಕಾರ್ಯ ಶ್ಲಾಘನೀಯ. ಹಿರಿಯರಾದ ಪಟ್ಟಡ ಎಂ. ಉತ್ತಪ್ಪ ಹಾಗೂ ತೇಲಂಪಡ ಎಂ. ಕಾರ್ಯಪ್ಪ ಅವರು 1925ರಲ್ಲಿ ತಮ್ಮ ಚಿಂತನೆಯನ್ನು ಅನುಷ್ಠಾನಗೊಳಿಸಿ ಶ್ರಮಿಸಿದ ಪರಿಣಾಮ ಸಂಘ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರು.

ಸಂಘದ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಏನೇ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕು, ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.

ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಶತಸಂಭ್ರಮ ಭವನ ನಿರ್ಮಾಣಕ್ಕೆ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಎಂಎಲ್‌ಸಿ ಅನುದಾನದಿಂದ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನ ಗೌಡ, ವ್ಯಕ್ತಿ ಅಥವಾ ಒಂದು ಸಂಸ್ಥೆ ಬೆಳವಣಿಗೆ ಕಾಣಬೇಕಾದರೆ ಸ್ಥಾಪಕರ ಸ್ಮರಣೆ ಅಗತ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್. ಚೇತನ್, ಸದಸ್ಯರೇ ಸಂಸ್ಥೆಯ ಜೀವಾಳವಾಗಿದ್ದಾರೆ. ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಕಾಳಜಿ ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಸಹಕಾರಿ ಕ್ಷೇತ್ರಕ್ಕೂ ಸೈ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ. ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಂಪಡ ಎಂ. ಕಾರ್ಯಪ್ಪ ಅವರ ನಿಸ್ವಾರ್ಥ ಚಿಂತನೆ ಮತ್ತು ಶ್ರಮದ ಫಲವಾಗಿ ಸಂಘ ಇಂದು ಶತಮಾನೋತ್ಸವವನ್ನು ಆಚರಿಸಿದೆ. ಮಡಿಕೇರಿಯ ಹೃದಯ ಭಾಗದಲ್ಲಿ 58 ಸೆಂಟ್ಸ್ಟ್ ಜಾಗವನ್ನು ಹೊಂದಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ‘ಶತಸಂಭ್ರಮ’ ಭವನ ನಿರ್ಮಾಣಕ್ಕೆ ಶಂಕುಸ್ಥಪನೆ ನೆರವೇರಿಸಲಾಗಿದೆ. ಸಂಘದ ಯಶಸ್ಸನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತೇವೆ ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಮಾತನಾಡಿ, ಸಂಘದ ಈ ಸಾಧನೆ ಇತಿಹಾಸ ಸೃಷ್ಟಿಸಿದೆ ಎಂದರು.

ಮಂಗಳೂರಿನ ಕೆಐಒಸಿಎಲ್ ಲಿಮಿಟೆಡ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ತೇಲಪಂಡ ಎಂ. ಕಾರ್ಯಪ್ಪ ಮಾತನಾಡಿ, ನನ್ನ ಅಜ್ಜ ಕಾರ್ಯಪ್ಪ ಅವರು ಹಠವಾದಿ, ಹೊಸತನದ ಪ್ರವೃತ್ತಿ ಹೊಂದಿದ್ದರು. ಹೊಸ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದರು, ಇದರ ಪರಿಣಾಮದಿಂದ ಈ ಸಂಸ್ಥೆ ಸ್ಥಾಪನೆಯಾಯಿತು ಎಂದರು.

ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಎಸ್.ಸಿ. ನಟೇಶ ಅವರು ಕೊಡಗು ಸಂಘ ನೂರು ವರ್ಷ ಸಾಗಿ ಬಂದ ಹಾದಿಯನ್ನು ವಿವರಿಸಿದರು. ಕೊಡಗು ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಟಿ.ಆರ್. ಶರವಣ ಕುಮಾರ್, ರಾಜ್ಯ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಹಿರಿಯ ಸಹಕಾರಿ ಹಾಗೂ ವಕೀಲ ಬಸವರಾಜ್ ಸಂಗಪ್ಪನವರ್, ಉದ್ಯಮಿ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಕೆ.ಎಸ್., ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಎಚ್.ಜಿ., ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಮುತ್ತಮ್ಮ ಪಿ.ಎಸ್., ಕೊಡಗು ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಡಿ. ರವಿಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಕೂಡಿಗೆ ಡಯಟ್ ನ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ., ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಟಿ.ಜಿ., ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎಚ್.ಆರ್. ಮುತ್ತಪ್ಪ, ನಿರ್ದೇಶಕರಾದ ಮಂಜುನಾಥ್ ಎಚ್.ಎನ್., ಪುದಿಯನೆರವನ ರೇವತಿ ರಮೇಶ್, ದೇವಾನಂದ ಎನ್.ಸಿ. ಮತ್ತಿತರರಯ ಪಾಲ್ಗೊಂಡಿದ್ದರು.ಭವನಕ್ಕೆ ಶಂಕುಸ್ಥಾಪನೆ:

ಶಾಸಕ ಎ.ಎಸ್. ಪೊನ್ನಣ್ಣ ಅವರು ‘ಶತಸಂಭ್ರಮ ಭವನ’ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನ ಗೌಡ ಅವರು ಸೌಹಾರ್ದ ಸೌರಭ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಿದರು.ಹಿರಿಯ ಸಹಕಾರಿಗಳಿಗೆ ಸನ್ಮಾನ;

ಸಭಾ ಕಾರ್ಯಕ್ರಮದಲ್ಲಿ ಹಿರಿಯ ನೂರು ಸಹಕಾರಿಗಳನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿದರು. ಶತಸಂಭ್ರಮ ಕಾರ್ಯಕ್ರಮದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ. ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಂಪಡ ಎಂ. ಕಾರ್ಯಪ್ಪ ಅವರ ಕುಟುಂಬದ ಸದಸ್ಯರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶತಸಂಭ್ರಮದ ಪ್ರಯುಕ್ತ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಉಡುಗೊರೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಡಿ ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸ!
ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ತಾಂತ್ರಿಕ ತನಿಖೆ ಆರಂಭ