ಮುಂಡಾಲ ಸಮಾಜದ ಮಹಾಸಭೆ ಸಮ್ಮೇಳನ
ಭಾರತದ ಹಿಂದು ಸಂಸ್ಕೃತಿಗೆ ಮುಂಡಾಲ ಸಮಾಜದ ಕೊಡುಗೆ ಅಪಾರ ಎಂದು ಕಚ್ಚೂರು ಕ್ಷೇತ್ರದ ಧರ್ಮದರ್ಶಿ ಗೋಕುಲದಾಸ್ ತಿಳಿಸಿದರು.
ತಾಲೂಕಿನ ದಾಸರಹಳ್ಳಿ ಗ್ರಾಪಂ ಮೈದಾನದಲ್ಲಿ ಭಾನುವಾರ ಅಖಿಲ ಭಾರತ ಮುಂಡಾಲ ಸಮಾಜದ ತಾಲೂಕು ಸಮಿತಿ ಹಮ್ಮಿ ಕೊಂಡಿದ್ದ ಮುಂಡಾಲ ಸಮಾಜದ ಮಹಾಸಭೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಮುಂಡಾಲ ಸಮಾಜ ತಮ್ಮ ಮೂಲ ಸಂಸ್ಕೃತಿಗಳಾದ ನೇಮೋತ್ಸವ, ದೈವಾರಾಧನೆಯನ್ನು ಆಚರಿಸಿಕೊಂಡು ಬರುತ್ತಿದ್ದು, ದೇಶದ ಕಲೆ ಸಂಸ್ಕಾರ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.ನಂಬಿಕೆಗೆ ಅರ್ಹ ಹಾಗೂ ಮುಗ್ದ ಜನರು ಮುಂಡಾಲ ಸಮಾಜದವರು ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡು ಇತರೆ ಸಣ್ಣಪುಟ್ಟ ಕೆಲಸ ಕಾರ್ಯ, ವ್ಯಾಪಾರ ವಹಿವಾಟು ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಮುಂಡಾಲ ಸಮಾಜ ಹಿಂದು ಸಮಾಜದ ಒಂದು ಭಾಗ. ದೈವ ಹಾಗೂ ದೇಶ ಭಕ್ತಿಯನ್ನು ಬಿಟ್ಟು ಕೊಡದೆ ಇರುವ ಸಮಾಜವಾಗಿದೆ. ಎರಡ್ಮೂರು ತಲೆಮಾರುಗಳ ಹಿಂದೆ ಉದ್ಯೋಗ ಅರಸಿ ಬಂದವರು. ಜತೆಗೆ ತಮ್ಮ ದೈವಗಳನ್ನು ಕರೆತಂದು ದೈವಾರಾಧನೆ ಮುಂದುವರಿಸುತ್ತಾ ಇಲ್ಲಿವರೆಗೂ ಕಟ್ಟಿ ಬೆಳಸಿದ ಸಮಾಜ ಮುಂಡಾಲ ಸಮಾಜವೆಂದು ತಿಳಿಸಿದರು.
ಶಾಸಕನಾದ ಮೇಲೆ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಸಹಾಯ ಮಾಡುವ ಕೆಲಸ ಮಾಡಿದ್ದೇನೆ. ಮುಂಡಾಲ ಸಮಾಜದವರು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕೇಳಿದ್ದಾರೆ. ಜನಾಂಗದವರು ಹೆಚ್ಚಿರುವ ಸ್ಥಳದಲ್ಲಿ ಜಾಗ ಗುರುತಿಸಿ ಕೊಟ್ಟರೆ ಆ ಜಾಗವನ್ನು ಮುಂಡಾಲ ಸಮಾಜಕ್ಕೆ ಇನ್ನೆರೆಡು ವರ್ಷದಲ್ಲಿ ಮಂಜೂರು ಮಾಡುವ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ಮಾತನಾಡಿ, ಈ ಸಮಾಜದ ಜನಾಂಗದ ಬೇಡೆಕೆಗೆ ಸರ್ಕಾರ ಸ್ಪಂದಿಸ ಬೇಕು. ಸಮುದಾಯ ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಅಲ್ಲದೆ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷ ವಿಜಯಕುಮಾರ್ ಎರೇಹಳ್ಳ ಮಾತನಾಡಿ, ಮುಂಡಾಲ ಸಮಾಜದ ಜನರು ಒಗ್ಗಟಾಗಿ ಸಂಘಟಿತ ರಾಗಬೇಕು. ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು. ಸಮಾಜದ ಜನರು ನಮ್ಮ ಸಭೆ, ಚರ್ಚೆ ಕಾರ್ಯಕ್ರಮಗಳಿಗೆ ಆಗಮಿಸಿ ಪಾಲ್ಗೊಳ್ಳಬೇಕು ಆಗ ಮಾತ್ರ ಏಳಿಗೆ ಸಾಧ್ಯ ಎಂದರು.ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.