ಅಪರೂಪದ ಹಲಸು, ಮಾವಿನ ತಳಿಗಳ ಸಂರಕ್ಷಣೆ ಮಾಡಿ

KannadaprabhaNewsNetwork |  
Published : May 18, 2026, 01:15 AM IST
13 | Kannada Prabha

ಸಾರಾಂಶ

ಮಕ್ಕಳಿಗೆ ಹಲಸಿನ ಬಗ್ಗೆ ಅರಿವು ಮೂಡಿಸಿ ಅವರಿಗೆ ನಮ್ಮ ಸ್ಥಳೀಯ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಡುತ್ತಿರುವುದು

ಕನ್ನಡಪ್ರಭ ವಾರ್ತೆ ಮೈಸೂರು

ಹಲಸು ಮತ್ತು ಮಾವಿನ ಅಪಾರವಾದ ವೈವಿಧ್ಯ ನಮ್ಮ ಮೈಸೂರು ಭಾಗದಲ್ಲಿದೆ. ಹುಳಿ ಮಾವಿನ ಮರ ಮತ್ತು ಇತರ ಕಾಡು ಮಾವಿನ ತಳಿಗಳ ಭಂಡಾರವೇ ನಮ್ಮ ಕಾಡು ಪ್ರದೇಶದಲ್ಲಿದೆ. ಅಪರೂಪದ ಹಲಸಿನ ತಳಿಗಳು ಕೂಡ ಇಲ್ಲಿವೆ. ಇವುಗಳನ್ನು ಸಂರಕ್ಷಿಸದೆ ಹೋದರೆ ಮುಂದಿನ ಪೀಳಿಗೆಗೆ ಈ ತಳಿಗಳು ನೋಡಲು ಕೂಡ ಸಿಗುವುದಿಲ. ಇಂತ ತಳಿಗಳನ್ನು ಗುರುತಿಸಿ, ಜನಪ್ರಿಯ ಮಾಡಬೇಕಾದ ಅಗತ್ಯವಿದೆ ಎಂದು ಡಿಸಿಎಫ್ (ಸಾಮಾಜಿಕ ಅರಣ್ಯ) ಶಂಕರೇಗೌಡ ಕರೆ ನೀಡಿದರು.

ನಗರದ ನಂಜರಾಜ ಬಹದ್ದೂರ್ ಛತ್ತದಲ್ಲಿ ಸಹಜ ಸಮೃದ್ಧ, ದೇಸಿ ಸೀಡ್ಸ್ ಪ್ರಡ್ಯೂಸರ್ ಕಂಪನಿ ಮತ್ತು ತೋಟಗಾರಿಕೆ ಇಲಾಖೆ– ಕಿಸಾನ್ ಮಾಲ್ ಆಶ್ರಯದಲ್ಲಿ ನಡೆದ ಹಲಸಿನ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ನಾ ಕಂಡಂತೆ ಹಲಸು’ ಚಿತ್ರಕಲಾ ಸ್ಪರ್ಧೆಯ ಮಕ್ಕಳಿಗೆ ಅವರು ಬಹುಮಾನ ವಿತರಿಸಿದರು.

ಮಕ್ಕಳಿಗೆ ಹಲಸಿನ ಬಗ್ಗೆ ಅರಿವು ಮೂಡಿಸಿ ಅವರಿಗೆ ನಮ್ಮ ಸ್ಥಳೀಯ ಸಸ್ಯ ಸಂಪತ್ತಿನ ಪರಿಚಯ ಮಾಡಿಕೊಡುತ್ತಿರುವುದು, ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಹಲಸಿನ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಈ ಚಿತ್ರಕಲಾ ಸ್ಪರ್ಧೆಯ 5 ರಿಂದ 9 ವರ್ಷದ ವಿಭಾಗದಲ್ಲಿ ಎಸ್. ಮೌಲ್ಯ( ಪ್ರಥಮ), ಎಸ್.ಕೆ. ರಿಷಿಕಾ ನಂದಿ (ದ್ವಿತೀಯ) ಮತ್ತು ಎ. ವಿಹಾನ್ (ತೃತೀಯ) ಬಹುಮಾನ ಗಳಿಸಿದರು. 10 ರಿಂದ 12 ವರ್ಷದ ವಿಭಾಗದಲ್ಲಿ ಆದ್ಯ ಎ. ಶ್ರೀವತ್ಸ (ಪ್ರಥಮ), ಧೀರಜ್ (ದ್ವಿತೀಯ) ಮತ್ತು ಗೋಕುಲ್ ಆರ್ಯನ್ (ತೃತೀಯ) ಬಹುಮಾನ ಗಳಿಸಿದರು.

ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಜಯಲಕ್ಷ್ಮಿ ಮತ್ತು ಪುರುಷರ ವಿಭಾಗದಲ್ಲಿ ಎಸ್.ಡಿ. ಮೋಹನ್ ಕುಮಾರ್ ಬಹುಮಾನ ಗಳಿಸಿದರು. ಹಲಸು ಎತ್ತುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಾಮಚಂದ್ರ, ಹಲಸು ಹಣ್ಣಿನ ತೂಕ ಊಹಿಸುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸುಮಿತಾ ಬಹುಮಾನ ಗಳಿಸಿದರು.

ಭರತನಾಟ್ಯ ಕಲಾವಿದರಾದ ಪೂಜಶ್ರೀ ಮತ್ತು ಎಸ್. ವರಮಹಾಲಕ್ಷಿ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ ಅಂಗಡಿ, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮೊದಲಾದರು ಇದ್ದರು.

----

ಬಾಕ್ಸ್...

2 ದಿನಗಳ ಹಬ್ಬಕ್ಕೆ ತೆರೆ

ಎರಡು ದಿನಗಳ ಹಲಸಿನ ಹಬ್ಬ ಜನರನ್ನು ಆಕರ್ಷಿಸಲು ಯಶಸ್ವಿಯಾಯಿತು. ಆರು ಸಾವಿರಕ್ಕೂ ಹೆಚ್ಚಿನ ಜನರು ಮೇಳಕ್ಕೆ ಭೇಟಿ ನೀಡಿದರು. ಕೆಂಪಲಸು ತಳಿಗಳಾದ ಸಿದ್ದು, ಮತ್ತು ಶಂಕರ ತಳಿಗಳ ಒಂದು ಸಾವಿರ ಗಿಡಗಳು ಮಾರಾಟವಾದವು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಹಲಸು ಬೆಳೆಗಾರರು ತಂದಿದ್ದ ಹಲಸು ಮಾರಾಟವಾಯಿತು. ಕೆಂಪು ಬಣ್ಣದ ಚಂದ್ರ ಹಲಸು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ಹಲಸಿನ ಮೌಲ್ಯವರ್ಧಿತ ಪದಾರ್ಥಗಳನ್ನು ಜನರು ಆಸಕ್ತಿಯಿಂದ ಖರೀದಿ ಮಾಡಿದ್ದು ವಿಶೇಷ. ದಶೇರಿ ಮತ್ತು ಇತರೆ ಸಾವಯವ ಮಾವು ಮಾರಾಟಕ್ಕೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಎರಡು ದಿನಗಳ ಮೇಳದಲ್ಲಿ 30 ಲಕ್ಷದ ವಹಿವಾಟು ನಡೆಯಿತು.

ಹಲಸು ಮೇಳಕ್ಕೆ ಬರಲು ಸಾಧ್ಯವಾಗದ ಗ್ರಾಹಕರ ಅನುಕೂಲಕ್ಕಾಗಿ ಕುಕ್ಕರಹಳ್ಳಿಕೆರೆಯ ತೋಟಗಾರಿಕಾ ನರ್ಸರಿ ಆವರಣದಲ್ಲಿರುವ ಕಿಸಾನ್ ಮಾಲ್ ನಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಒಂದು ವಾರಗಳ ಕಾಲ ಇಲ್ಲಿ ಮಾವು ಮತ್ತು ಹಲಸು ಗ್ರಾಹಕರಿಗೆ ಲಭ್ಯವಿರುತ್ತವೆ. ಇಲ್ಲಿಂದ ಸಾವಯವ ಅಕ್ಕಿ, ಸಿರಿಧಾನ್ಯ ಮತ್ತು ಬೇಳೆಕಾಳುಗಳನ್ನು ಕೂಡ ಖರೀದಿಸಬಹುದು. ಹೆಚ್ಚಿನ ವಿವರಗಳಿಗೆ ಶ್ರೀನಿವಾಸ್ ಮೊ. 99007 46499 ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿರುಗಾಳಿ, ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ನಾಶ
ಎಲ್ಲ ಸಮುದಾಯಗಳ ಹಿತ ಕಾಯುವ ಹೊಣೆ ನನ್ನ ಮೇಲಿದೆ