ಕರೋನಾ ಮಾದರಿಯಲ್ಲಿಯೇ ಡೆಂಘೀ ನಿಯಂತ್ರಿಸಿ

KannadaprabhaNewsNetwork |  
Published : Jul 25, 2024, 01:23 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್       | Kannada Prabha

ಸಾರಾಂಶ

ಕರೋನಾ ಮಾದರಿಯಲ್ಲಿ ಡೆಂಘೀ ನಿಯಂತ್ರಿಸಲು ಅಗತ್ಯ ಕ್ರಮಗಳಿಗೆ ಮುಂದಾಗಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಡೆಂಘೀ ನಿಯಂತ್ರಣಕ್ಕೆ ವಾರ್ಡ್‌ವಾರು ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ನೀರುಗಂಟಿಯವರು, ನಗರಸಭೆ ಸಿಬ್ಬಂದಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರೋನ ನಿಯಂತ್ರಣ ಸಂದರ್ಭದಲ್ಲಿ ರಚಿಸಿದಂತೆ ಪ್ರತಿ ವಾರ್ಡ್‌ಗಳಿಗೆ ಕ್ಷೀಪ್ರ ನಿಗಾವಣೆ ತಂಡ ರಚಿಸಲು ತಿಳಿಸಿದ ಅವರು, ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಮುಖ್ಯವಾಗಿ ಸೊಳ್ಳೆಗಳ ಉತ್ಪತ್ತಿ ತಾಣ ನಾಶ ಮಾಡುವ ಜತೆಗೆ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ. ಲಾರ್ವಾ ಸಮೀಕ್ಷೆ ಗುಣಮಟ್ಟದಲ್ಲಿ ಮಾಡಲಾಗಿದ್ದು ಸಾಂದ್ರತೆ ಪ್ರಮಾಣ 100 ಮನೆಗೆ 10 ಮನೆಗಳಲ್ಲಿ ಕಂಡು ಬಂದಿದೆ. ಇದು ಕಡಿಮೆಯಾಗಬೇಕು. ಅಬೇಟ್ ದ್ರಾವಣ ಸರಿಯಾದ ಪ್ರಮಾಣದಲ್ಲಿ ಹಾಕಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ ಮಾತನಾಡಿ, ಜಿಲ್ಲಾದ್ಯಂತ 430 ಡೆಂಘೀ ಪ್ರಕರಣಗಳು ಕಂಡುಬಂದಿದ್ದು, ಚಿತ್ರದುರ್ಗ ನಗರದಲ್ಲಿ 111 ಪ್ರಕರಣಗಳು ಇವೆ. ಸೊಳ್ಳೆಗಳ ತಾಣಗಳೆಂದು ಪಂಚರ್ ಶಾಪ್, ಗುಜರಿ ಅಂಗಡಿಗಳು, ಬಸ್ ನಿಲ್ದಾಣ, ಬಸ್‌ ಡಿಪೋ, ಖಾಲಿ ನಿವೇಶನ, ಟೀ ಅಂಗಡಿ ಈ ಪ್ರದೇಶದಲ್ಲಿ ಹೆಚ್ಚಿನ ಗಮನಹರಿಸಿ. ನಗರದಲ್ಲಿ 12 ಹಾಟ್‌ ಸ್ಪಾಟ್ ಗುರುತಿಸಲಾಗಿದೆ. ಮನೆ ಮನೆ ಭೇಟಿ, ಜ್ವರ, ಲಾರ್ವಾ ಸಮೀಕ್ಷೆ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭ ಮಾಡಿ, ಹಾಟ್‌ಸ್ಪಾಟ್ ಪ್ರದೇಶದ ಪ್ರಕರಣದ ಮನೆಯ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಒಳಾಂಗಣ ಧೂಮಲೀಕರಣ ಮಾಡಲು ತಿಳಿಸಿದರು.

ಸಾರ್ವಜನಿಕರ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ರಚಿಸಿ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿಯನ್ನಾಗಿ ರಂಗಾರೆಡ್ಡಿ ನಿಯೋಜಿಸಲಾಗಿದೆ. ಡೆಂಘೀ ವಾರ್ ರೂಂ ಸಹಾಯವಾಣಿ ಸಂಖ್ಯೆ 7411633365 ಸ್ಥಾಪಿಸಲಾಗಿದ್ದು, ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.

ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸರಳಾ, ನಾಗರಾಜ್, ಗುರುಮೂರ್ತಿ, ನಂದೀಶ್, ಗೋಪಾಲಕೃಷ್ಣ, ಪ್ರವೀಣ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಂಜುಳಾ, ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಆಶಾ ಕಾರ್ಯಕರ್ತೆಯರು ಇದ್ದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಡೆಂಘೀ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕಸದ ವಾಹನಗಳಲ್ಲಿ ಧ್ವನಿ ವರ್ದಕಗಳ ಮೂಲಕ ಪ್ರಸಾರ ಮಾಡಿ ಗುಂಪು ಸಭೆ, ತಾಯಂದಿರ ಸಭೆ, ಸಮುದಾಯ ಸಭೆ, ಕರಪತ್ರ ವಿತರಣೆ, ಶಾಲಾ ಅಂಗನವಾಡಿಗಳ ಸುತ್ತ-ಮುತ್ತ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!