ಯಲ್ಲಾಪುರ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಭದ್ರತಾ ಕೊಠಡಿ ಉದ್ಘಾಟನೆ
ಮನುಷ್ಯನಿಗೆ ಅತಿಯಾದ ಆಸೆಗೆ ವಿವೇಚನೆ ಮಾಡಿ ನಿಯಂತ್ರಣ ಹೇರಬೇಕು. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಇತಿಮಿತಿಯಲ್ಲಿ ನಮ್ಮ ಆರ್ಥಿಕ ವ್ಯವಹಾರ ಮಾಡಬೇಕು. ನಾವೇನಾದರೂ ನಮ್ಮ ಮಿತಿಮೀರಿ ಸಾಲ ಮಾಡಿದರೆ ತೀವ್ರ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅದರ ಅರಿವು ನಮಗಿರಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಮಂಗಳವಾರ ಪಟ್ಟಣದ "ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ "ದ ವಜ್ರಮಹೋತ್ಸವ ಮತ್ತು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಭದ್ರತಾ ಕೊಠಡಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಅತೀ ಸುಖ ಬಯಸುವುದು ದುಃಖಕ್ಕೆ ಕಾರಣ. ಸುಖ ಬೇಕು, ಅದಕ್ಕೆ ಮಿತಿ ಹಾಕಿಕೊಳ್ಳಬೇಕು. ನಮ್ಮ ಬದುಕು ಬೇರೆಯವರಿಗೆ ಹೊರೆಯಾಗದ ರೀತಿಯಲ್ಲಿರಬೇಕು. ಜೀವನ ಶಾಶ್ವತವಲ್ಲ. ಎಲ್ಲವೂ ದೇವರ ಕೈಯಲ್ಲಿದೆ. ನಮಗೆ ಯಾವ ಸ್ವಾತಂತ್ರ್ಯವೂ ಇಲ್ಲ ಎಂಬ ಸತ್ಯ ಅರಿತಿರಬೇಕು. ಸತ್ಯ ಮಾರ್ಗ, ವೈರಾಗ್ಯ ಭಾವದಿಂದ ಮುನ್ನಡೆದರೆ ನಮ್ಮ ಬದುಕಿಗೆ ಒಂದು ಅರ್ಥ ದೊರೆಯುತ್ತದೆ. ಅನೇಕರು ಸಮಾಜಮುಖಿಯಾಗಿ ಇಂತಹ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತ ಮುನ್ನಡೆಯುತ್ತಾರೆ. ಅದರ ಕಷ್ಟದ ಅರಿವು ಕೆಲವರಿಗೆ ಇರದು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಆ ದೃಷ್ಟಿಯಿಂದ ಈ ಸಂಸ್ಥೆ ಮಾದರಿಯಾಗಿ ರೂಪುಗೊಂಡಿದೆ ಎಂದ ಶ್ರೀಗಳು, ಪ್ರಸ್ತುತ ದೇಶದ ವಿದ್ಯಮಾನ ಸ್ವಲ್ಪ ದುರಿತ ದಾರಿಯಲ್ಲಿದೆ. ಹಾಗಾಗಿಯೇ ಪ್ರಧಾನಿಗಳು ಇಂಧನ ಬಳಸುವವರು ಎಚ್ಚರಿಕೆ ವಹಿಸಿ, ಮಿತಿಯಾಗಿ ಬಳಸಿ ಇತ್ಯಾದಿ ವಿನಂತಿಯನ್ನು ಮಾಡಿದ್ದಾರೆ. ದೇಶದ ಹಿತವನ್ನರಿತು ನಾವು ಮುನ್ನಡೆಯಬೇಕಾಗಿದೆ ಎಂದರು.ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸುದೀರ್ಘವಾದ ಇತಿಹಾಸವನ್ನು ಹೊಂದಿದ ಈ ಸಂಸ್ಥೆ ಸಾವಿರಾರು ರೈತರ ಜೀವನಾಡಿಯಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆ ಉತ್ತಮವಾಗಿ ನಡೆದು ಬಂದಿದೆ. ಈ ಸಂಸ್ಥೆ ಹೀಗೆ ಶತಮಾನವನ್ನು ದಾಟಿ ರೈತರಿಗೆ ಶ್ರೀರಕ್ಷೆಯಾಗಿ ಬೆಳೆದು ನಿಲ್ಲಲಿ ಎಂದರು. ಸಂಸ್ಥೆಯ ಅಧ್ಯಕ್ಷ ನಾಗರಾಜ ಕವಡಿಕೆರೆ ಪ್ರಾಸ್ತಾವಿಕ ಮಾತನಾಡಿದರು. ಯಲ್ಲಾಪುರ ಸೀಮಾ ಮಾತೃಮಂಡಳಿ ಅಧ್ಯಕ್ಷೆ ಕಾವೇರಿ ಭಾಗ್ವತ ನೇತೃತ್ವದಲ್ಲಿ ಮಾತೆಯರು ಶ್ರೀಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ನಿರ್ದೇಶಕರಾದ ನರಸಿಂಹ ಕೋಣೆಮನೆ ನಿರ್ವಹಿಸಿದರು. ಗೋಪಾಲಕೃಷ್ಣ ಬಾಳೆಗದ್ದೆ ವಂದಿಸಿದರು. ಪಲ್ಲವಿ ಭಟ್ಟ ಕವಾಳೆ ಅವರ ವಂದೆ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಂತರ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರ ಮೇಳದಿಂದ ಚಂದ್ರಹಾಸ ಚರಿತ್ರೆ ಮತ್ತು ಮಾಯಾಮೃಗಾವತಿ ಯಕ್ಷಗಾನ ನಡೆಯಿತು.
ಸಂಘದ ಹಿರಿಯ ಸದಸ್ಯ ವೆಂಕಟ್ರಮಣ ಗೇರಗದ್ದೆ, ಎಲ್.ಪಿ.ಭಟ್ಟ ಗುಂಡ್ಕಲ್, ತಿಮ್ಮಣ್ಣ ಭಟ್ಟ ಜಡ್ಡಿಗದ್ದೆ, ನಾರಾಯಣ ಭಟ್ಟ ಹಾಡೆಪಾಲ, ದಾಮೋದರ ಹೆಗಡೆ, ಕೃಷ್ಣ ಆಚಾರಿ, ವಿಶ್ವನಾಥ ಪಾಟಣಕರ, ಗಣಪತಿ ಶೇಟ್, ನಾರಾಯಣ ಸಿದ್ದಿ, ಮಹಾದೇವ ನಾಯ್ಕ ಉಪಸ್ಥಿತರಿದ್ದರು.ಮಹನೀಯರಿಗೆ ಸನ್ಮಾನ:ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಜ್ರಮಹೋತ್ಸವದಲ್ಲಿ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯನಿರ್ವಾಹಕರು ಮತ್ತು ಸಂಸ್ಥೆಯ ಕಾನೂನು ಸಲಹೆಗಾರರಿಗೆ ಸಂಮಾನ ಮಾಡಲಾಯಿತು.ಲೆಕ್ಕ ಪರಿಶೋಧಕರಾದ ಸಿ.ಎ ವಿಘ್ನೇಶ್ವರ ಗಾಂವ್ಕರ, ನ್ಯಾಯವಾದಿಗಳಾದ ನಾಗೇಶ ಭಾಗ್ವತ, ಜಿ.ವಿ. ಭಾಗ್ವತ ಹಾಗೂ ಸಂಸ್ಥಾಪಕರಾದ ಹಿರಿಯರಿಗೆ ಮರಣೋತ್ತರವಾಗಿ ಅವರ ಮಕ್ಕಳನ್ನು ಸನ್ಮಾನಿಸಲಾಯಿತು. ನಾಗೇಶ ಸುಬ್ರಾಯ ಮಳಲಗಾಂವ್, ನಾರಾಯಣ ಭಟ್ಟ ಹುಲೆಕೋಣೆ, ಮಹಾಬಲೇಶ್ವರ ಭಟ್ಟ, ಸುಬ್ರಾಯ ಭಟ್ಟ ಗುಂಡ್ಕಲ್, ಗಣಪತಿ ವಿ ಅರೇಗುಳಿ, ಟಿ.ಕೆ.ಭಾಗ್ವತ ನಂದೊಳ್ಳಿ, ದತ್ತಾತ್ರೇಯ ಹಂಗಾರಿ, ಸರಸ್ವತಿ ಹುಲೆಕೋಣೆ, ಶಂಕರ ಭಟ್ಟ ಹಿಟ್ಟಿನಬೈಲ್ ಅಲ್ಲದೇ, ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ನಾಗೇಶ ಹೆಗಡೆ ಪಣತಗೇರಿ, ಸುಬ್ಬಣ್ಣ ಗಾಣಗದ್ದೆ, ಉಪಾಧ್ಯಕ್ಷರಾದ ಎಂ.ಎನ್.ಭಟ್ಟ ಮಂಗಳಾರ್ತಿ, ಟಿ.ಜಿ ಘಟ್ಟಿ, ಶ್ರೀಪಾದ ಹೆಗಡೆ ಸವಣಗೆರೆ ಮತ್ತು ಕಟ್ಟಡ ನಿರ್ಮಾಣ ಮಾಡಿದ ಅಭಿಯಂತರ ಎಸ್.ವಿ.ಭಟ್ಟ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ನಾಗೇಶ ಹೆಗಡೆ ಪಣತಗೇರಿ, ಸುಬ್ರಾಯ ಭಟ್ಟ ಗುಂಡ್ಕಲ್, ಟಿ.ಜಿ.ಘಟ್ಟಿ, ಜಿ.ವಿ.ಭಾಗ್ವತ ಮಾತನಾಡಿದರು.